ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 17-06-2021
# ಸತ್ಯ ನಾಡೆಲ್ಲಾಗೆ ಮೈಕ್ರೋಸಾಫ್ಟ್ ಚೇರ್ಮನ್ ಹುದ್ದೆ
# ಹೊಸ ಬಾಹ್ಯಾಕಾಶ ಕೇಂದ್ರದತ್ತ ಜಿಗಿದ ಚೀನಾದ ಗಗನ ಯಾತ್ರಿಗಳು
# ಶ್ರೀಲಂಕಾ ಭಾರತದಿಂದ 100 ಮಿಲಿಯನ್ ಡಾಲರ್ ನೆರವು :
ಬರುವ 2030ರೊಳಗೆ ಶೇ.70 ರಷ್ಟು ನವೀಕರಿಸಬಹುದಾದ ಇಂಧನ ಸದ್ಬಳಕೆ ಮಾಡಿಕೊಂಡು ಸೌರಶಕ್ತಿ ಬಳಕೆಯಲ್ಲಿ ಸಾಧನೆ ಮಾಡಲು ಮುಂದಾಗಿರುವ ಶ್ರೀಲಂಕಾಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಲು ಭಾರತ ತೀರ್ಮಾನಿಸಿದೆ. ಭಾರತದ 100 ಮಿಲಿಯನ್ ಅಮೆರಿಕನ್ ಡಾಲರ್ ನೆರವಿನೊಂದಿಗೆ ಶ್ರೀಲಂಕಾದ ಸೌರಶಕ್ತಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುವ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೌರಶಕ್ತಿ ಸದ್ಬಳಕೆಗಾಗಿ ರಚನೆಯಾಗಿರುವ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದಲ್ಲಿ ಭಾರತ ಸೇರಿದಂತೆ 89 ರಾಷ್ಟ್ರಗಳ ಸದಸ್ಯ ರಾಷ್ಟ್ರಗಳಾಗಿವೆ. ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಶ್ರೀಲಂಕಾ 2030ರೊಳಗೆ ಶೇ70 ರಷ್ಟು ವಿದ್ಯುತ್ನ್ನು ಸೌರಶಕ್ತಿಯಿಂದ ಪಡೆದುಕೊಳ್ಳುವ ಯೋಜನೆ ರೂಪಿಸಿದ್ದು, ಇಂತಹ ಯೋಜನೆಗೆ ಹಣಕಾಸಿನ ನೆರವು ನೀಡಿರುವ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಒಳಗಾಗಿದೆ.
# ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ವಿಜಯಕೃಷ್ಣ ನಿಧನ
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಬಿ. ವಿಜಯಕೃಷ್ಣ (71) ನಿಧನರಾದರು. ಎಡಗೈ ಸ್ಪಿನ್ನರ್ ಮತ್ತು ಬ್ಯಾಟ್ಸ್ಮನ್ ಆಗಿದ್ದ ವಿಜಯಕೃಷ್ಣ ಅವರು 1968 ರಿಂದ 1984ರವರೆಗೆ ಕರ್ನಾಟಕ ತಂಡದಲ್ಲಿ ಆಡಿದ್ದರು. 80 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ವಿಜಯಕೃಷ್ಣ 2297 ರನ್ಗಳನ್ನು ಗಳಿಸಿದ್ಧಾರೆ. ಅದರಲ್ಲಿ ಎರಡು ಶತಕಗಳಿವೆ. 194 ವಿಕೆಟ್ಗಳನ್ನೂ ಗಳಿಸಿದ್ದಾರೆ. ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್ ಅವರ ಸಮಕಾಲೀನ ಆಟಗಾರರಾಗಿದ್ದ ವಿಜಯಕೃಷ್ಣ, ಕರ್ನಾಟಕ ತಂಡವು 1973-74ರಲ್ಲಿ ಮೊದಲ ಸಲ ರಣಜಿ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
# ವಿಶ್ವದ ಮೂರನೇ ಅತಿದೊಡ್ಡ ವಜ್ರ ಪತ್ತೆ :
ವಿಶ್ವದ ಮೂರನೇ ಅತಿದೊಡ್ಡ ವಜ್ರ ಎನ್ನಲಾದ 1098 ಕ್ಯಾರೆಟ್ ತೂಕದ ವಜ್ರದ ಹರಳತ್ತು ಪತ್ತೆ ಮಾಡಿರುವುದಾಗಿ ವಜ್ರ ಸಂಸ್ಥೆ ದೇಬಲ್ವಾನಾ ಪ್ರಕಟಿಸಿದೆ. ಈ ಅಮೂಲ್ಯ ಹರಳು ಜೂನ್ 1ರಂದು ಪತ್ತೆಯಾಗಿದ್ದು, ಅಧ್ಯಕ್ಷ ಮೊಗ್ವೀತ್ಸಿ ಮೈಸಿ ಅವರಿಗೆ ರಾಜಧಾನಿ ಗಾಬೊರೋನ್ನಲ್ಲಿ ಪ್ರದರ್ಶಿಸಲಾಗಿದೆ.
“ಬಹುಶಃ ಇದು ವಿಶ್ವದಲ್ಲೇ ಪತ್ತೆಯಾದ ಮೂರನೇ ಅತಿದೊಡ್ಡ ಗಾತ್ರದ ವಜ್ರ” ಎಂದು ದೇಬಸ್ವಾನ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಅರ್ಮ್ಸ್ಟ್ರಾಂಗ್ ಹೇಳಿದ್ದಾರೆ. ಇದು ಕಂಪನಿಯ ಇತಿಹಾಸದಲ್ಲೇ ಪತ್ತೆಯಾದ ಅತಿದೊಡ್ಡ ವಜ್ರ ಗುಣಮಟ್ಟದ ಹರಳು ಆಗಿದೆ.
ಈ ಕಂಪನಿ ಬೋಟ್ಸುವಾನ ಸರ್ಕಾರ ಮತ್ತು ಜಾಗತಿಕ ವಜ್ರ ಕಂಪನಿಯಾದ ಡೆ ಬೀರ್ಸ್ ನಡುವಿನ ಸಹಭಾಗಿತ್ವದ ಕಂಪನಿ. ವಿಶ್ವದಲ್ಲಿ ಇದುವರೆಗೆ ಪತ್ತೆಯಾಗಿರುವ ಅತಿದೊಡ್ಡದ ವಜ್ರದ ಹರಳು ಕುಲಿನನ್ 3106 ಕ್ಯಾರೆಟ್ ಇದ್ದು, ಇದು 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು.
ಎರಡನೇ ಅತಿದೊಡ್ಡ ವಜ್ರ 1109 ಕ್ಯಾರೆಟ್, ಲೆಸಿಡಿಲಾ ರೋನಾ ಟೆನಿಸ್ ಬಾಲ್ ಗಾತ್ರದ್ದಾಗಿದೆ. ಇದು 2015ರಲ್ಲಿ ಆಗ್ನೇಯ ಬೋಟ್ಸುವಾನಾದ ಕರೋವೆಯಲ್ಲಿ ಪತ್ತೆಯಾಗಿತ್ತು. ಬೋಟ್ಸುವಾನಾ, ಆಫ್ರಿಕಾದ ಅಗ್ರಗಣ್ಯ ವಜ್ರ ಉತ್ಪಾದನೆ ದೇಶವಾಗಿದೆ.
# ಗ್ರಾಮೀಣ ಭಾರತಕ್ಕೆ ಗೂಗಲ್ ನೆರವು:
ಭಾರತದ ಗ್ರಾಮೀಣ ಭಾಗಗಳಲ್ಲಿ 80 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು ಆರೋಗ್ಯ ಕಾರ್ಯಕರ್ತರ ಕೌಶಲ ಅಭಿವೃದ್ಧಿಗಾಗಿ ₹113 ಕೋಟಿ ದೇಣಿಗೆ ನೀಡುವುದಾಗಿ ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಹೇಳಿದೆ. ಇದಕ್ಕಾಗಿ ‘ಗೀವ್ಇಂಡಿಯಾ’ಗೆ ₹90 ಕೋಟಿ ಮತ್ತು ‘ಪಾಥ್’ಗೆ ₹18.5 ಕೋಟಿ ದೇಣಿಗೆ ನೀಡಲಾಗುವುದು’ ಎಂದು ಗೂಗಲ್ ತಿಳಿಸಿದೆ.
20,000 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ನಿರ್ವಹಣೆಯ ವಿಶೇಷ ತರಬೇತಿ ನೀಡಲು ಮತ್ತು ಗ್ರಾಮೀಣ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಅಪೋಲೊ ಮೆಡ್ಸ್ಕಿಲ್ಸ್ಗೆ ಗೂಗಲ್ ಹಣಕಾಸಿನ ನೆರವು ನೀಡಲಿದೆ. ‘ಭಾರತದ 15 ರಾಜ್ಯಗಳಲ್ಲಿ 180,000 ಆಶಾ ಕಾರ್ಯಕರ್ತೆಯರು ಮತ್ತು 40,000 ಎಎನ್ಎಂ ಕಾರ್ಯಕರ್ತರಿಗೆ ಕೌಶಲ ಕಾರ್ಯಕ್ರಮಗಳನ್ನು ನಡೆಸಲು ಅರ್ಮಾನ್ ಸಂಸ್ಥೆಗೆ ₹3.6 ಕೋಟಿ ನೆರವು ನೀಡಲಾಗುವುದು’ ಎಂದು ಗೂಗಲ್ ತಿಳಿಸಿದೆ.