• ಆಹಾರವನ್ನು ಉತ್ಕರ್ಷಿಸಿ ಶಕ್ತಿಯ ಬಿಡುಗಡೆಯೊಡನೆ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಹೊರಹಾಕುವ ಕ್ರಿಯೆಯನ್ನು ಶ್ವಾಸಕ್ರಿಯೆ ಎನ್ನುತ್ತಾರೆ.
• ಶ್ವಾಸಕ್ರಿಯೆಯಲ್ಲಿ 2 ವಿಧಗಳಿವೆ.
1. ಆಕ್ಸಿಜನ್ ಸಹಿತ ಶ್ವಾಸಕ್ರಿಯೆ
ಈ ಕ್ರಿಯೆಯಲ್ಲಿ ಆಕ್ಸಿಜನ್‍ನಿಂದ ಸಾವಯವ ಸಂಯುಕ್ತಗಳು ವಿಭಜನೆಯಾಗಿ ಶಕ್ತಿ, ಇಂಗಾಲದ ಡೈ ಆಕ್ಸೈಡ್ ನೀರು ಬಿಡುಗಡೆಯಾಗುತ್ತವೆ. ಈ ರೀತಿಯ ಶ್ವಾಸಕ್ರಿಯೆಯು ಮೇಲ್ಮಟ್ಟದ ಪ್ರಾಣಿಗಳಲ್ಲಿ ನಡೆಯುತ್ತವೆ.
ಗ್ಲುಕೋಸ್ + ಆಕ್ಸಿಜನ್ - ಇಂಗಾಲದ ಡೈ ಆಕ್ಸೈಡ್ + ನೀರು + ಶಕ್ತಿ
2. ಆಕ್ಸಿಜನ್ ರಹಿತ ಶ್ವಾಸಕ್ರಿಯೆ
ಈ ಕ್ರಿಯೆಯಲ್ಲಿ ಸಾವಯವ ಸಂಯುಕ್ತಗಳು ಆಕ್ಸಿಜನ್‍ನ ಸಹಾಯವಿಲ್ಲದೆ ವಿಭಜನೆಯಾಗಿ ಈಥೈಲ್ ಆಲ್ಕೋಹಾಲ್, ಇಂಗಾಲದ ಡೈ ಆಕ್ಸೈಡ್, ಸ್ವಲ್ಪ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ರೀತಿಯ ಶ್ವಾಸಕ್ರಿಯೆ ಕೆಳಮಟ್ಟದ ಜೀವಿಗಳಾದ ಬ್ಯಾಕ್ಟೀರಿಯಾ ಹಾಗೂ ಯೀಸ್ಟ್‍ಗಳಲ್ಲಿ ಕಂಡು ಬರುತ್ತವೆ.
ಗ್ಲುಕೋಸ್ —> ಈಥೈಲ್ ಆಲ್ಕೋಹಾಲ್ + ಕಾರ್ಬನ್ ಡೈ ಆಕ್ಸೈಡ್ + ಶಕ್ತಿ
• ಶ್ವಾಸ ಕ್ರಿಯೆಯ ಹಂತಗಳು: ಮಾನವನು ಸೇರಿದಂತೆ ಪ್ರಾಣಿಗಳಲ್ಲಿ ಶ್ವಾಸಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತವೆ. 1. ಬಾಹ್ಯ ಶ್ವಾಸಕ್ರಿಯೆ 2. ಆಂತರಿಕ ಶ್ವಾಸಕೋಶ
1. ಬಾಹ್ಯ ಶ್ವಾಸಕ್ರಿಯೆ : ರಕ್ತ ಮತ್ತು ಮಾಧ್ಯಮದ(ಭೂ ಜೀವಿಗಳಲ್ಲಿ ಗಾಳಿ ಮತ್ತು ಜಲಜೀವಿಗಳಲ್ಲಿ ನೀರು) ನಡುವೆ ನಡೆಯುವ ಆಮ್ಲಜನಕ ಮತ್ತು ಇಂಗಾಲ ಡೈ ಆಕ್ಸೈಡ್ ಅನಿಲಗಳ ವಿನಿಮಯವನ್ನು “ಬಾಹ್ಯ ಶ್ವಾಸಕ್ರಿಯೆ” ಎನ್ನುತ್ತಾರೆ.
ಬಾಹ್ಯ ಶ್ವಾಸಕ್ರಿಯೆಯಲ್ಲಿ ಜಲವಾಸಿಗಳಲ್ಲಿ ಆಮ್ಲಜನಕವು ನೀರಿನಿಂದ ಕಿವಿರುಗಳಿಗೂ, ಕಿವಿರುಗಳಿಂದ ಇಂಗಾಲದ ಡೈ ಆಕ್ಸೈಡ್ ನೀರಿಗೂ ವಿನಿಮಯ ಆಗುತ್ತದೆ.
ಭೂವಾಸಿಗಳಲ್ಲಿ ಬಾಹ್ಯ ಶ್ವಾಸಕ್ರಿಯೆಯಲ್ಲಿ ಆಮ್ಲಜನಕವು ವಾತಾವರಣದಿಂದ ಶ್ವಾಸಕೋಶಗಳಲ್ಲಿರುವ ಆಲ್ವಿಯೋಲೈಗೂ(ವಾಯುಕೋಶ), ಆಲ್ವಿಯೋಲೈನಿಂದ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೂ ವಿನಿಮಯವಾಗುತ್ತದೆ
• ಬಾಹ್ಯಶ್ವಾಸಕ್ರಿಯೆಯ ಹಂತಗಳು
ಎ. ಉಚ್ಛ್ವಾಸ : ವಾತಾವರಣದ ಗಾಳಿಯನ್ನು ( ಆಮ್ಲಜನಕ) ಮೂಗಿನ ಮೂಲಕ ಶ್ವಾಸಕೋಶಗಳಿಗೆ ತೆಗೆದುಕೊಳ್ಳುವುದನ್ನು “ಉಚ್ಛ್ವಾಸ” ಎನ್ನುತ್ತಾರೆ.
ಬಿ. ನಿಶ್ವಾಸ : ಶ್ವಾಸಕೋಶಗಳಲ್ಲಿರುವ ಗಾಳಿಯನ್ನು (ಇಂಗಾಲದ ಡೈ ಆಕ್ಸೈಡ್) ಮೂಗಿನ ಮೂಲಕ ಹೊರಹಾಕುವುದನ್ನು “ ನಿಶ್ವಾಸ” ಎನ್ನುವರು.
2. ಆಂತರಿಕ ಶ್ವಾಸಕೋಶ : ರಕ್ತ ಮತ್ತು ಜೀವಕೋಶಗಳ ನಡುವೆ ನಡೆಯುವ ಅನಿಲಗಳ ವಿನಿಮಯವನ್ನು ಆಂತರಿಕ ಶ್ವಾಸಕೋಶ ಎನ್ನುತ್ತಾರೆ.
ರಕ್ತಕ್ಕೆ ಬಂದ ಆಮ್ಲಜನಕವು ರಕ್ತಪರಿಚನೆಯ ಮೂಲಕ ಪ್ರತಿಯೊಂದು ಜೀವಕೋಶಕ್ಕೂ ತಲುಪುತ್ತದೆ. ಜೀವಕೋಶದ ಮೈಟೋಕಾಂಡ್ರಿಯಾವು ರಕ್ತದಲ್ಲಿ ಬಂದಂತಹ ಆಮ್ಲಜನಕ ಮತ್ತು ಗ್ಲೂಕೋಸನ್ನು ತೆಗೆದುಕೊಳ್ಳುತ್ತದೆ. ಇವೆರಡೂ ಉತ್ಕರ್ಷಣೆಗೊಂಡು ನೀರು, ಇಂಗಾಲದ ಡೈ ಆಕ್ಸೈಡ್ ಮತ್ತು ಶಕ್ತಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ಇಂಗಾದ ಡೈ ಆಕ್ಸೈಡ್ ಮತ್ತೆ ರಕ್ತಕ್ಕೆ ಬಂದು, ಅಲ್ಲಿಂದ ಶ್ವಾಸಕೋಶಗಳಿಗೆ ತಲುಪುತ್ತದೆ. ಇದನ್ನೇ ಆಂತರಿಕ ಶ್ವಾಸಕ್ರಿಯೆ ಎನ್ನುತ್ತೇವೆ.
• ಮಾನವನಲ್ಲಿ ಶ್ವಾಸಾಂಗವ್ಯೂಹ
ಮಾನವನ ಶ್ವಾಸಂಗವ್ಯೂಹವು ಮೂಗು, ಗಂಟಲು, ಧ್ವನಿ ಪೆಟ್ಟಿಗೆ, ಶ್ವಾಸನಾಳ, ಬ್ರಾಂಕೈ, ಬ್ರಾಂಕಿಯೋಲ್‍ಗಳು ಮತ್ತು ಶ್ವಾಸಕೋಶಗಳನ್ನು ಒಳಗೊಂಡಿದೆ.
• ಶ್ವಾಸಕೋಶಗಳು : ಎರಡು ಶ್ವಾಸಕೋಶಗಳು ಎದೆಯ ಗೂಡಿನಲ್ಲಿವೆ. ದ್ವಿಪದರದ ಪಕ್ಕೆ ಪೊರೆಯಿಂದ ಪ್ರತಿ ಶ್ವಾಸಕೋಶ ಆವರಿಸಲ್ಪಟ್ಟಿದೆ. ಶ್ವಾಸಕೋಶವನ್ನು ಆವರಿಸಿರುವ ಪೊರೆಯನ್ನು ‘ಪ್ಲ್ಯೂರಾ’ ಎನ್ನುವರು. ಶ್ವಾಸಕೋಶಗಳು ಸ್ಪಂಜಿನಂತಹ ಸ್ಥಿತಿಸ್ಥಾಪಕ ಶಕ್ತಿ ಇರುವ ಅಂಗಾಂಶದಿಂದ ಆಗಿವೆ. ಶ್ವಾಸನಾಳದ ಕವಲುಗಳು ನಂತರ ಬ್ರಾಂಕಿಯೋಲ್‍ಗಳಾಗಿ ಒಡೆದು ಅತ್ಯಂತ ಸೂಕ್ಷ್ಮವಾದ ನಳಿಕೆಗಳು ವಾಯುಕೋಶ (ಆಲ್ವಯೋಲೈ)ಗಳೆಂಬ ಚೀಲದಂತಹ ರಚನೆಗಳಲ್ಲಿ ಕೊನೆಗೊಳ್ಳುತ್ತವೆ.
• ಅನಿಲಗಳ ವಿನಿಮಯ : ಶ್ವಾಸಕೋಶಗಳಲ್ಲಿ ಉಚ್ಛ್ವಾಸದ ನಂತರ ವಾಯುಕೋಶ ಮತ್ತು ರಕ್ತದ ನಡುವೆ ಅನಿಲಗಳ ವಿನಿಮಯ ನಡೆಯುತ್ತದೆ. ಒಳತೆಗೆದುಕೊಂಡ ಗಾಳಿಯಲ್ಲಿರುವ ಆಕ್ಸಿಜನ್ ವಾಯುಕೋಶದ ಗೋಡೆಯಲ್ಲಿರುವ ತೇವಾಂಶಕ್ಕೆ ವಿಸರಣೆ ಹೊಂದಿ ಅಲ್ಲಿಂದ ರಕ್ತಕ್ಕೆ ವಿಸರಣೆಯಾಗುತ್ತದೆ. ರಕ್ತದಲ್ಲಿರುವ ಹಿಮೋಗ್ಲೋಬಿನ್ ಜೊತೆ ಸಂಯೋಗ ಹೊಂದಿ ಆಕ್ಸಿಹಿಮೋಗ್ಲೋಬಿನ್ ಆಗುತ್ತದೆ. ಅದು ಆಕ್ಸಿಜನ್‍ನನ್ನು ಜೀವಕೋಶಗಳಿಗೆ ಒಯ್ಯುತ್ತದೆ. ಜೀವಕೋಶಗಳು ಆಕ್ಸಿಜನ್‍ನನ್ನು ವಿಸರಣೆಯಿಂದ ಪಡೆದು ಕಾರ್ಬನ್ ಡೈ ಆಕ್ಸೈಡ್‍ನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ರಕ್ತದಿಂದ ಇಂಗಾಲದ ಡೈ ಆಕ್ಸೈಡ್ ನಿಶ್ವಾಸದ ಮೂಲಕ ಹೊರಹಾಕಲ್ಪಡುತ್ತದೆ.
• ಮಾನವನ ಶ್ವಾಸ ಕ್ರಿಯೆಯ ರಚನೆ ಹಾಗೂ ಅವುಗಳ ಕಾರ್ಯ:
* ಮೂಗು : ಮೂಗಿನ ಒಳಗೆ ರೋಮಗಳು ಮತ್ತು ಶ್ಲೇಷ್ಮಾವರಣವಿದ್ದು, ಗಾಳಿಯನ್ನು ಶುದ್ಧಗೊಳಿಸುತ್ತದೆ.
* ನಾಸಿಕ ಕುಹರ : ಗಾಳಿಯು ಗಂಟಲಿಗೆ ಇದರ ಮೂಲಕ ಹಾದುಹೋಗುತ್ತವೆ.
* ಗಂಟಲು : ಆಹಾರ ಮತ್ತು ಗಾಳಿ ಎರಡೂ ಹಾದುಹೋಗುವ ಸಾಮಾನ್ಯ ಮಾರ್ಗವಾಗಿದೆ.
* ಲ್ಯಾರಿಂಕ್ಸ್ : ಆಹಾರವು ಶ್ವಾಸನಾಳವನ್ನು ಪ್ರವೇಶಿಸದಂತೆ ತಡೆಯುವ ಎಪಿಗ್ಲಾಟಿಸ್ ಪೊರೆಯನ್ನು ಹೊಂದಿವೆ. ಈ ಭಾಗದಲ್ಲಿ ಧ್ವನಿಪೆಟ್ಟಿಗೆ ಇದೆ.
* ಶ್ವಾಸನಾಳ: ಗಾಳಿಯು ಹಾದುಹೋಗುವ ಮಾರ್ಗ, ಒಳಗಿನ ಶ್ಲೇಷ್ಮಾವರಣ ಪೊರೆಯು ಗಾಳಿಯನ್ನು ಶುದ್ಧಗೊಳಿಸುತ್ತದೆ.
* ಬ್ರಾಂಕಸ್ : ಗಾಳಿಯೂ ಹಾದುಹೋಗುವ ಮಾರ್ಗವಾಗಿದೆ.
* ಬ್ರಾಕಿಯೋಲ್ : ಇದು ಕೂಡ ಗಾಳಿಯ ಮಾರ್ಗವಾಗಿದೆ.
* ಗಾಳಿಗೂಡುಗಳು : ಇಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್‍ಗಳ ವಿನಿಮಯ ಕ್ರಿಯೆಯು ರಕ್ತ ಮತ್ತು ಆಲ್ವಿಯೋಲೈಗಳ ನಡುವೆ ನಡೆಯುತ್ತದೆ.
* ಶ್ವಾಸಕೋಶ : ಗಾಳಿಯು ಹಾದುಹೋಗುವ ರಚನೆಯಾಗಿದ್ದು, ಅನಿಲಗಳ ವಿನಿಮಯ ನಡೆಯುತ್ತದೆ.
* ವಪೆ : ನಿಶ್ವಾಸ ಕ್ರಿಯೆಯು ನಡೆಯಲು ಗಾಳಿಯನ್ನು ಹೊರಗೆ ತಳ್ಳುತ್ತದೆ. ಉಚ್ವಾಸದಲ್ಲಿ ಕೆಳಕ್ಕೆ ಹಿಗ್ಗುತ್ತದೆ.