ಭಾರತೀಯ ವಾಯುಪಡೆ ಇತಿಹಾಸದಲ್ಲಿ ಇಂದು (10-09-2020) ಮಹತ್ವದ ದಿನ. ಫ್ರಾನ್ಸ್ ನ ಐದು ಅತ್ಯಂತ ಪ್ರಬಲ ರಫೇಲ್ ಫೈಟರ್ ಜೆಟ್‍ಗಳು ಐಎಎಫ್‍ಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಹರ್ಯಾಣದ ಅಂಬಾಲ ವಾಯು ನೆಲೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಐದು ರಫೇಲ್ ಸಮರ ವಿಮಾನಗಳು ಐಎಎಫ್‍ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡವು. ಬಳಿಕ ಈ ಯುದ್ಧ ವಿಮಾನಗಳಿಗೆ ಸರ್ವ ಧರ್ಮ ವಿಶೇಷ ಪೂಜೆ ನೆರವೇರಿಸಲಾಯಿತು.
ತರುವಾಯ 17 ಸ್ಕ್ವಾರ್ಡನ್‍ಗೆ ರಫೇಲ್‍ಗಳ ವಿದ್ಯುಕ್ತ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಫ್ರಾನ್ಸ್‍ನ ರಫೇಲ್ ಮತ್ತು ಭಾರತದ ತೇಜಸ್ ಸಮರ ವಿಮಾನಗಳು ಬಾನಂಗಳದಲ್ಲಿ ರೋಚಕ ಹಾರಾಟ ಪ್ರದರ್ಶನ ನಡೆಸಿದವು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ಸೇನಾಪಡೆ ಸಚಿವೆ ಫೋರೆನ್ಸ್ ಪರ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಮನಸೆಳೆದರು. ಭಾರತದ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವ್, ಭಾರತೀಯ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ಕಾರ್ಯದರ್ಶಿ ಡಾ. ಸತೀಶ್ ರೆಡ್ಡಿ ಮತ್ತು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಫ್ರೆಂಚ್ ನಿಯೋಗವನ್ನು ಭಾರತದ ಫ್ರಾನ್ಸ್ ರಾಯಭಾರಿ ಎಮ್ಮಾನುಯೆಲ್ ಲೆನೈನ್, ಏರ್ ಜನರಲ್ ಎರಿಕ್ ಅಟಲೆಟ್ ಹಾಗೂ ಫ್ರಾನ್ಸ್ ವಾಯುಪಡೆಯ ಮುಖ್ಯಸ್ಥರು ಮತ್ತು ಉನ್ನತಾಧಿಕಾರಿಗಳು ಪ್ರತಿನಿಧಿಸಿದ್ದರು. ಈ ಫೈಟರ್ ಜೆಟ್‍ಗಳು ಇಂದಿನಿಂದ ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರೋಸ್‍ನ ಭಾಗವಾಗಿದೆ. ಕಳೆದ ಜುಲೈ 27ರಂದು ಐದು ರಫೇಲ್ ಯುದ್ದ ವಿಮಾನಗಳು ಫ್ರಾನ್ಸ್‍ನಿಂದ ಹರ್ಯಾಣದ ಅಂಬಾಲಾಗೆ ಬಂದಿಳಿದಿದ್ದವು.
ರೂ.59,000 ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿ ನಾಲ್ಕು ವರ್ಷಗಳಾಗಿದ್ದರೂ, ಮೊದಲ ಬ್ಯಾಚ್‌ನ ಐದು ಯುದ್ಧವಿಮಾನಗಳನ್ನು ಕಳೆದ ಜನವರಿಯಲ್ಲಿ ಭಾರತಕ್ಕೆ ತರಲಾಗಿತ್ತು. ಎರಡನೇ ಹಂತದಲ್ಲಿ ನಾಲ್ಕು ಅಥವಾ ಐದು ರಫೇಲ್ ಯುದ್ಧವಿಮಾನಗಳು ನವೆಂಬರ್‌ನಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲಾ ಯುದ್ಧವಿಮಾನಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ರಫೇಲ್ ವಿಶೇಷತೆಗಳೇನು ಗೊತ್ತೇ..?
ರಫೇಲ್ ವಿಮಾನ ಗಂಟೆಗೆ ಗರಿಷ್ಠ 750 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸಬಲ್ಲದು. ರಫೇಲ್ ಜೆಟ್ 9,500 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ರಫೇಲ್ ಯುದ್ಧ ವಿಮಾನ ಇಳಿಯಲು 450 ಮೀಟರ್ ಉದ್ದದ ರನ್ ವೇ ಅಗತ್ಯವಿದೆ.
* ರಫೇಲ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ರಫೇಲ್ ಅವಳಿ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ. ರಫೇಲ್ ಯುದ್ಧ ವಿಮಾನ ಆಕಾಶ ಹಾಗೂ ನೌಕಾನೆಲೆಯಿಂದಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
*ರಫೇಲ್ ನಲ್ಲಿ ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿ ಉಡ್ಡಯನ ಮಾಡುವ ಸಾಮರ್ಥ್ಯ ಇದೆ. ಅನತಿ ದೂರದಿಂದ(ಕಣ್ಣಿಗೆ ಕಾಣಿಸದಷ್ಟು)ಲೂ ದಾಳಿ ನಡೆಸಬಲ್ಲ ವೈಶಿಷ್ಠ್ಯತೆ ರಫೇಲ್ ಯುದ್ಧ ವಿಮಾನದಲ್ಲಿದೆ.
*ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ದು ಸೇರಿದಂತೆ ಎಲ್ಲಾ ರೀತಿಯ ವೈಮಾನಿಕ ದಾಳಿ ನಡೆಸುವ ಸರ್ವಸಾಮರ್ಥ್ಯ ರಫೇಲ್ ಯುದ್ಧ ವಿಮಾನಕ್ಕಿದೆ. ಆಕಾಶ ಮಾರ್ಗದಲ್ಲಿಯೇ ಶತ್ರು ದೇಶದ ವಿಮಾನಗಳ ಮೇಲೆ ದಾಳಿ ನಡೆಸಬಲ್ಲದು.
* ರಾಡಾರ್ ವಾರ್ನಿಂಗ್ ರಿಸೀವರ್ ಹೊಂದಿದೆ. ಹತ್ತು ಗಂಟೆಗಳ ಕಾಲ ಫ್ಲೈಟ್ ಡಾಟಾ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ. ಲೇಸರ್ ವಾರ್ನಿಂಗ್, ರೇಡಾರ್ ಜಾಮರ್ ಹಾಗೂ 1800 ಕಿ,ಮೀ ವ್ಯಾಪ್ತಿ ವೈರಿಪಡೆಯ ಚಟುವಟಿಕೆ ಗ್ರಹಿಸುವ ಸಾಮರ್ಥ್ಯ ಹೊಂದಿದೆ.
* ರಫೇಲ್ ವಿಮಾನದ ರೆಕ್ಕೆಗಳ ಉದ್ದ: 10.8 ಮೀಟರ್
* ವಿಂಗ್(ರೆಕ್ಕೆಯ ಅಗಲ) ಏರಿಯಾ :45.7ಮೀಟರ್
* ರಫೇಲ್ ಯುದ್ಧ ವಿಮಾನದ ಒಟ್ಟು ಉದ್ದ:15.3 ಮೀಟರ್
* ರಫೇಲ್ ಯುದ್ಧ ವಿಮಾನದ ಎತ್ತರ: 5.34 ಮೀಟರ್
* ರಫೇಲ್(ಖಾಲಿ) ತೂಕ: ಅಂದಾಜು 10.3 ಟನ್