ಉತ್ತರಾಖಂಡದ ಹೊಸ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ

ಉತ್ತರಾಖಂಡದ ಹೊಸ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ

ಭಾರತೀಯ ಜನತಾ ಪಕ್ಷದ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪುಷ್ಕರ್ ಅವರನ್ನು ಶಾಸಕಾಂಗ ಸಭೆಯಲ್ಲಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಪಿತ್ತೋರಗಡ ಮೂಲದ 45 ವರ್ಷದ ಪುಷ್ಕರ್​ ಸಿಂಗ್​ ಧಾಮಿ ಅವರು ನಾಲ್ಕು ತಿಂಗಳಲ್ಲಿ ಸಿಎಂ ಹುದ್ದೆಗೆ ಏರುತ್ತಿರುವ ಮೂರನೇ ವ್ಯಕ್ತಿಯಾಗಲಿದ್ದಾರೆ. ಉತ್ತರಾಖಂಡ ಬಿಜೆಪಿ ಸರ್ಕಾರದ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್​ ರಾವತ್​ ಅವರ ಸ್ಥಾನಕ್ಕೆ ಮಾರ್ಚ್​ 10 ರಂದು ತೀರಥ್​ ಸಿಂಗ್ ರಾವತ್​ ಅವರನ್ನು ನೇಮಿಸಲಾಗಿತ್ತು. ತೀರಥ್​ ಸಿಂಗ್​ ನಿನ್ನೆ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ನೀಡಿದರು.

ಪುಷ್ಕರ್ ಸಿಂಗ್ ಧಾಮಿ ಅವರು ಉದಾಮ್ ಸಿಂಗ್ ನಗರ್ ಜಿಲ್ಲೆಯ ಖತಿಮಾ ಕ್ಷೇತ್ರದಿಂದ ಉತ್ತರಾಖಂಡ್ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ತಿರಥ್ ಸಿಂಗ್ ರಾವತ್ ಅವರು ತಮ್ಮ ರಾಜೀನಾಮೆಯನ್ನು ಗವರ್ನರ್ ಬೇಬಿ ರಾಣಿ ಮೌರ್ಯ ಅವರಿಗೆ ಹಸ್ತಾಂತರಿಸಿದ್ದರು. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರದಿರಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಿದ್ದರು.