ಭಾರತದ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗ ಪ್ರಶ್ನೋತ್ತರಗಳು
1. ಒಂದು ಸ್ಥಳದಲ್ಲಿ ಕಂಡುಬರುವ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗ ಯಾವ ಅಂಶಗಳನ್ನು ಅವಲಂಬಿಸಿರುತ್ತದೆ ..?
• ಒಂದು ಸ್ಥಳದಲ್ಲಿ ಕಂಡುಬರುವ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳು ಅಲ್ಲಿಯ ವಾಯುಗುಣ, ಪ್ರಾಕೃತಿಕ ಲಕ್ಷಣ ಮತ್ತು ಮಣ್ಣು ಇವುಗಳನ್ನು ಅವಲಂಬಿಸಿರುತ್ತದೆ.
2. ಪ್ರಾಕೃತಿಕ ಪರಿಸರ ಎಂದರೇನು?
• ಒಂದು ದೇಶದ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳೊಳಗೆ ಒಂದು ಗಾಢ ಸಂಬಂಧವಿದೆ. ಇದುವೇ ಪ್ರಾಕೃತಿಕ ಪರಿಸರ.
3. ವನ್ಯ ಸಂಕುಲ ಮತ್ತು ಪ್ರಾಣಿಸಂಕುಲ ಎಂದರೇನು?
• ಸ್ವಾಭಾವಿಕ ಸಸ್ಯವರ್ಗವನ್ನು ವನ್ಯಸಂಕುಲ ಎಂದೂ, ಪ್ರಾಣಿವರ್ಗವನ್ನು ಪ್ರಾಣಿಸಂಕುಲವೆಂದು ಹೇಳುತ್ತಾರೆ.
4. ಭಾರತದಲ್ಲಿ ಕಾಣಸಿಗುವ ವಿವಿಧ ಸ್ವಾಭಾವಿಕ ಸಸ್ಯವರ್ಗಗಳು ಯಾವುವು?
• ಭಾರತದ ಸಸ್ಯವರ್ಗಗಳನ್ನು ಹಲವು ವಿಧಗಳಾಗಿ ವಿಂಗಡಿಸಲಾಗಿದೆ. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು, ಉಷ್ಣವಲಯದ ಎಲೆ ಉದುರುವ ಕಾಡುಗಳು, ಉಷ್ಣವಲಯದ ಮುಳ್ಳುಗಿಡಗಳುಮತ್ತು ಪೊದೆಗಳು, ಮರುಭೂಮಿ ಸಸ್ಯವರ್ಗ, ಮ್ಯಾಂಗ್ರೋವ್ ಕಾಡುಗಳು ಹಾಗೂಹಿಮಾಲಯದ ಸಸ್ಯವರ್ಗ.
5. ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳ ಲಕ್ಷಣಗಳೇನು?
• ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳು ವರ್ಷದಲ್ಲಿ 250 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುವ ಮತ್ತು 25 ಡಿಗ್ರಿಯಿಂದ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಕಡೆಗಳಲ್ಲಿ ಕಂಡುಬರುತ್ತವೆ. ಈ ಕಾಡುಗಳು ಸದಾ ಹಸಿರಾಗಿರುವುದರಿಂದ “ನಿತ್ಯಹರಿದ್ವರ್ಣದ ಕಾಡುಗಳು” ಕರೆಯುತ್ತಾರೆ. ಅಧಿಕ ಮಳೆ, ಹೆಚ್ಚು ಉಷ್ಣಾಂಶ ಮತ್ತು ತೇವಾಂಶಗಳು ಈ ದಟ್ಟ ಅರಣ್ಯಗಳು ಬೆಳೆಯುವುದಕ್ಕೆ ಪೂರಕವಾಗಿದೆ. ಇಲ್ಲಿನ ಮರಗಳು ಸುಮಾರು 60 ಮೀಟರ್‍ಗಳಷ್ಟು ಎತ್ತರವಾಗಿ ಬೆಳೆಯುತ್ತವೆ. ನೀಳವಾಗಿರುವ ಈ ಮರಗಳ ರೆಂಬೆಗಳು ಚಪ್ಪರದಂತೆ ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಸೂರ್ಯನ ರಶ್ಮಿ ಭೂಮಿಯನ್ನು ತಲುಪುವುದಿಲ್ಲ.
ಇಲ್ಲಿ ಕಂಡುಬರುವ ಪ್ರಮುಖ ಜಾತಿಯ ಮರಗಳು ಎಬನಿ, ಮಹಾಗನಿ, ಕರಿಮರ ರಬ್ಬರ್ ಹಾಗೂ ಬಿದಿರು ಇತ್ಯಾದಿ.
6. ಭಾರತದಲ್ಲಿ ನಿತ್ಯಹರಿದ್ವರ್ಣದ ಕಾಡುಗಳು ಎಲ್ಲಿ ಕಂಡುಬರುತ್ತವೆ?
• ಭಾರತದಲ್ಲಿ ನಿತ್ಯಹರಿದ್ವರ್ಣದ ಕಾಡುಗಳು ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದಲ್ಲಿ , ಈಶಾನ್ಯ ಬೆಟ್ಟಗುಡ್ಡಗಳ ಪ್ರದೇಶ, ಮತ್ತು ಅಂಡಂಆನ್ ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ.
7. ಅರೆನಿತ್ಯ ಹರಿದ್ವರ್ಣ ಕಾಡುಗಳು ಎಲ್ಲಿ ಕಂಡುಬರುತ್ತವೆ?
• ಪಶ್ಚಿಮ ಘಟ್ಟಗಳ ಕಡಿಮೆ ಮಳೆ ಬೀಳುವ ಪ್ರದೇಶ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಡುಬರುತ್ತವೆ.
8. ಉಷ್ಣವಲಯದ ಎಲೆ ಉದುರುವ ಕಾಡುಗಳ ಲಕ್ಷಣಗಳೇನು?
• ಉಷ್ಣವಲಯದ ಎಲೆ ಉದುರುವ ಕಾಡುಗಳನ್ನು “ಮಾನ್ಸೂನ್ ಕಾಡುಗಳೆಂದೂ” ಕರೆಯುತ್ತಾರೆ. ಭಾರತದಲ್ಲಿ ಈ ರೀತಿಯ ಕಾಡುಗಳು ಬಹಳ ವಿಸ್ತಾರವಾಗಿ ಹರಡಿದೆ. ಇವು ವಾರ್ಷಿಕ 75 ರಿಂದ 250 ಸೆಂ.ಮಿ ಮಳೆ ಬೀಳುವ ಕಡೆಗಳಲ್ಲಿ ಕಂಡುಬರುತ್ತವೆ. ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ. ಈ ಕಾಡುಗಳಲ್ಲಿ ಬಿದಿರು ಬೆತ್ತ ಹೆಚ್ಚಾಗಿ ಬೆಳೆಯುತ್ತದೆ. ಬೆಸಗೆಯ ಪ್ರಾರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ. ಇಲ್ಲಿನ ಪ್ರಮುಖ ಮರಗಳೆಂದರೆ ತೇಗ, ಸಾಲ್ ಮತ್ತು ಶ್ರೀಗಂಧ.
9. ಉಷ್ಣವಲಯದ ಕಾಡುಗಳು ಕಂಡುಬರುವ ಭಾರತದ ಸ್ಥಳಗಳು ಯಾವುವು?
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು, ಪಶ್ಚಿಮ ಬಂಗಾಳ, ಛತ್ತಿಸಘಢ, ಒರಿಸ್ಸಾ, ಬಿಹಾರ ,ಝಾರ್ಖಂಡಗಳಲ್ಲಿ ಕಂಡುಬರುತ್ತವೆ.
10. ಉಷ್ಣವಲಯದ ಮುಳ್ಳುಗಿಡಗಳು ಮತ್ತು ಪೊದೆಗಳ ಕಾಡುಗಳು ಯಾವ ಪ್ರದೇಶಗಳಲ್ಲಿ ಕಂಡು ಬರುತ್ತವೆ.?
• ವಾರ್ಷಿಕವಾಗಿ ಸುಂಆರು 60 ರಿಂದ 75 ಸೆಂ.ಮಿ ಮಳೆ ಬೀಳುವ ದಖ್ಖನ್ ಪ್ರಸ್ಥಭೂಮಿಯ ಕೇಂದ್ರ ಭಾಗ, ಮಹಾರಾಷ್ಟ್ರದ ದಕ್ಷಿಣ ಭಾಗ, ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಕಡಪಾ ಹಾಗೂ ಕರ್ನೂಲು ಪ್ರದೇಶಗಳಲ್ಲಿ ಉಷ್ಣವಲಯದ ಮುಳ್ಳುಗಿಡಗಳು ಮತ್ತು ಪೊದೆಗಳ ಕಾಡುಗಳು ಇವೆ.
11. ಉಷ್ಣವಲಯದ ಮುಳ್ಳುಗಿಡಗಳು ಮತ್ತು ಪೊದೆಗಳ ಕಾಡುಗಳಲ್ಲಿ ಬೆಳೆಯುವ ಪ್ರಮುಖ ಜಾತಿಯ ಮರಗಳು ಯಾವುವು?
• ಈ ಕಾಡುಗಳಲ್ಲಿ ಬಬೂಲ್(ಜಾಲಿ), ಕಸವಿ ಸಸ್ಯಗಳು, ತಾಳೆ, ಕಿಕಾರ ಜಾತಿಯ ಮರಗಳು ಹಾಗೂ ಕೆಲವು ಜಾತಿಯ ಹುಲ್ಲು ಕೂಡ ಬೆಳಳೆಯುತ್ತವೆ.
12. ಮರಳುಗಾಡಿನ ಸಸ್ಯವರ್ಗವನ್ನು ವಿವರಿಸಿ.
• ಮರಳುಗಾಡಿನ ಸಸ್ಯಗಳು ಸಾಮಾನ್ಯವಾಗಿ ಆಳವಾದ ಬೇರುಗಳನ್ನು ಹೊಂದಿದ್ದು ಕುಬ್ಜವಾಗಿರುತ್ತದೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತದೆ. ಈ ರೀತಿಯ ಸಸ್ಯವರ್ಗ ಸಾಮಾನ್ಯವಾಗಿ 50 ಸೆಂ.ಮಿಗಿಂತ ಕಡಿಮೆ ವಾರ್ಷಿಕ ಮಳೆಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತದೆ.
13. ಭಾರತದಲ್ಲಿ ಯಾವ ಪ್ರದೇಶದಲ್ಲಿ ಮರಳುಗಾಡಿನ ಸಸ್ಯವರ್ಗ ಕಂಡುಬರುತ್ತದೆ?
• ರಾಜಸ್ಥಾನದ ಥಾರ್ ಮರುಭೂಮಿ, ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಅಂಚಿನಲ್ಲಿ ಕಂಡುಬರುತ್ತವೆ.
14. ಮರಳುಗಾಡಿನ ಸಸ್ಯವರ್ಗಗಳು ಯಾವುವು?
• ಜಾಲಿ, ಈಚಲ, ತಾಳೆ, ಕಳ್ಳಿ ಮತ್ತು ಖರ್ಜೂರದ ಮರಗಳು ಇಲ್ಲಿನ ಪ್ರಮುಖ ಜಾತಿಯ ಮರಗಳು.
15. ಮ್ಯಾಂಗ್ರೋವ್ ಅರಣ್ಯಗಳ ಲಕ್ಷಣಗಳನ್ನು ವಿವರಿಸಿರಿ.
• ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳು ಸಮುದ್ರದ ಉಬ್ಬರವಿಳಿತಗಳಿಂದಾದ ಕಾಡುಗಳು. ಬಿಳಿಲುಗಳು ಮ್ಯಾಂಗ್ರೋವ್ ಅರಣ್ಯಗಳ ಪ್ರಮುಖ ಲಕ್ಷಣವಾಗಿದೆ. ‘ಕೆಂದಾಳೆ ಮರಗಳು’ ಈ ಕಾಡುಗಳಲ್ಲಿ ಕಂಡುಬರುತ್ತವೆ.
16. ಮ್ಯಾಂಗ್ರೋವ್ ಕಾಡುಗಳು ಭಾರತದಲ್ಲಿ ಎಲ್ಲಿ ಕಂಡುಬರುತ್ತವೆ?
• ಈ ಕಾಡುಗಳನ್ನು ಭಾರತದಲ್ಲಿ ಗಂಗಾ, ಗೋದಾವರಿ, ಮಹಾನದಿ ಮತ್ತು ಕೃಷ್ಣಾ ನದಿಗಳ ಮುಖಜಭೂಮಿಗಳಲ್ಲಿ ಕಾಣುತ್ತೇವೆ.
17. ಗಂಗಾನದಿ ಮುಖಜಭೂಮಿಯಲ್ಲಿನ ಮ್ಯಾಂಗ್ರೋವ್ ಕಾಡುಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ.?
• ಗಂಗಾನದಿಯ ಮುಖಜಭೂಮಿಯಲ್ಲಿನ ಮ್ಯಾಂಗ್ರೋವ್ ಅರಣ್ಯಗಳನ್ನು “ ಸುಂದರ್‍ಬನ್” ಎಂದು ಕರೆಯುತ್ತಾರೆ.
18. ಗಂಗಾನದಿ ಮುಖಜಭೂಮಿಯಲ್ಲಿನ ಮ್ಯಾಂಗ್ರೋವ್ ಕಾಡುಗಳನ್ನು ಸುಂದರ್‍ಬನ್ ಎಂದು ಕರೆಯಲು ಕಾರಣವೇನು?
• ಕಾರಣವೆನೇಂದರೆ ಈ ಕಾಡುಗಳಲ್ಲಿ ಸುಂದರಿ ಎಂಬ ಜಾತಿಯ ಮರಗಳು ಅಧಿಕವಾಗಿದೆ. ಹೀಗಾಗಿ ಸುಂದರ್‍ಬನ್ ಎಂಬ ಹೆಸರು ಬಂದಿದೆ.
19. ಹಿಮಾಲಯದ ಸಸ್ಯವರ್ಗವನ್ನು ವಿವರಿಸಿರಿ.
• ಎತ್ತರ ಮತ್ತು ಮಳೆಗನುಸಾರವಾಗಿ ಹಿಮಾಲಯ ಪರ್ವತಗಳಲ್ಲಿ ಸಸ್ಯವರ್ಗಗಳ ಬದಲಾವಣೆಯನ್ನು ಕಾಣಬಹುದು. ಹಿಮಾಲಯದ ಕೆಳವಲಯದಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಇವೆ. 1500 ರಿಂದ 3500 ಮಿ ಎತ್ತರದ ವಲಯಗಳಲ್ಲಿ ಮೊನಚಾದ ಎಲೆಗಳುಳ್ಳ “ ಸೂಚಿಪರ್ಣ” ಕಾಡುಗಳಿವೆ. 3650 ರಿಂದ 4875 ಮೀ ಎತ್ತರದಲ್ಲಿ ಹುಲ್ಲುಗಾವಲುಗಳಿವೆ. ಇಲ್ಲಿಂದ ಮೇಲಿನ ಎತ್ತರದಲ್ಲಿ ಬೇಸಿಗೆಯಲ್ಲಿ ಹಿಮ ಕರಗಿದಾಗ ಕಲ್ಲು, ಹೂವು, ಪಾಚಿ ಮುಂತಾದ ಸಸ್ಯವರ್ಗವಿದೆ. ಇದಕ್ಕಿಂತ ಎತ್ತರದ ಪ್ರದೇಶಗಳಲ್ಲಿ ಸದಾ ಹಿಮಾವೃತವಾಗಿರುವುದರಿಂದ ಅಲ್ಲಿ ಯಾವುದೇ ಸಸ್ಯಗಳು ಬೆಳೆಯುವುದಿಲ್ಲ.
20. ಭಾರತದಲ್ಲಿ ಮಾತ್ರ ಕಾಣಬರುವ ಅಪರೂಪದ ವಿಶಿಷ್ಟ ಪ್ರಾಣಿಗಳಾವುವು?
• ಭಾರತದಲ್ಲಿ ಮಾತ್ರ ಕಾಣಬರುವ ಅಪರೂಪದ ಪ್ರಾಣಿಗಳು- ಸ್ಟಾಂಪ್ ಡೀರ್, ಚೌಸಿಂಗ್, ಕಾಶ್ಮೀರದ ಕಡವೆ, ಬ್ಲ್ಯಾಕ್‍ಬಕ್, ನೀಲ್‍ಗಾಯ್ ಹಾಗೂ ಒಂದು ಕೊಂಬಿನ ಘೇಂಡಾಮೃಗ.
21. ಹಿಮಾಲಯದಲ್ಲಿ ಕಾಣಬರುವ ಪ್ರಾಣಿಗಳನ್ನು ಹೆಸರಿಸಿ.
• ಕಾಡು ಕುರಿ, ಯಾಕ್, ಬೆಟ್ಟದ ಆಡು, ಐಬೆಕ್ , ಪಾಂಡ, ಹಿಮಚಿರತೆ, ಲಂಗೂರ್ ಮತ್ತು ಇತರ ಜಾತಿಯ ಮಂಗಗಳು ಹಿಮಾಲಯ ಪರ್ವತ ಪ್ರದೇಶದಲ್ಲಿ ವಾಸಿಸುವ ಕೆಲವು ಪ್ರಾಣಿಗಳು.
22. ಪ್ರಸಿದ್ಧ ಬೆಂಗಾಲ್ ಹುಲಿಗಳು ಕಂಡುಬರುವ ಕಾಡುಗಳು ಯಾವುದು?
• ಸುಂದರ್‍ಬನ್ ಕಾಡುಗಳು
23. ಗುಜರಾತ್ ರಾಜ್ಯದ ಗಿರ್ ಕಾಡುಗಳಲ್ಲಿ ವಾಸಿಸುವ ಮುಖ್ಯವಾದ ಪ್ರಾಣಿ ಯಾವುದು?
• ಸಿಂಹ
24. ಭಾರತದ ರಾಷ್ಟ್ರೀಯ ಅರಣ್ಯ ನೀತಿಯನ್ನು ಯಾವಾಗ ಅನುಮೋದಿಸಲಾಯಿತು.?
• 1952
25. ಭಾರತದಲ್ಲಿ ವೈದ್ಯಮಯ ವನ್ಯಜೀವಿಗಳಿವೆ. ಇದಕ್ಕೆ ಕಾರಣವೇನು?
• ಏಕೆಂದರೆ ಇಲ್ಲಿ ವೈಧ್ಯಮಯ ಹವಾಗುಣ ಮತ್ತು ನೈಸರ್ಗಿಕ ಸಸ್ಯವರ್ಗಗಳಿವೆ.