Current AffairsLatest Updates

Sunita Williams ” 286 ದಿನಗಳ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್

Sunita Williams : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಅವರು ಫ್ಲೋರಿಡಾ ಕರಾವಳಿಯಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. ಸುನಿತಾ, ಬುಚ್‌ ಜೊತೆಗೆ ರಷ್ಯಾದ ಅಲೆಕ್ಸಾಂಡರ್‌ ಗೋರ್ಬುನೋವ್‌ ಮತ್ತು ಅಮೆರಿಕದ ನಿಕ್‌ ಹೇಗ್‌ ಅವರನ್ನು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಕಂಪನಿಯ ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್‌ ಭೂಮಿಗೆ ಕರೆತಂದಿದೆ.

ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ನೌಕೆ ನಿಗದಿಯಂತೆ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಭೂಮಿಯನ್ನು ತಲುಪಿದೆ.

ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.

ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.

ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಇವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಕ್ಕಿಹಾಕಿಕೊಂಡಿದ್ದರು. ಜೂನ್ 5, 2024 ರಂದು ಒಂದು ವಾರದ ಕಾರ್ಯಾಚರಣೆಗೆಂದು ಅಂತರಿಕ್ಷಕ್ಕೆ ಹೋದವರು ಅಲ್ಲಿಯೇ ತಾಂತ್ರಿಕ ಸಮಸ್ಯೆಯಿಂದಾಗಿ ಸಿಲುಕಿಹಾಕಿಕೊಂಡಿದ್ದರು. ಅವರನ್ನು ಮರಳಿ ಕರೆತರಲು ಅಮೆರಿಕದ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಗಳನ್ನು ಐಎಸ್ ಎಸ್ ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಪ್ರಯಾಣ ಬೆಳೆಸಿತ್ತು.

ಟಚ್‌ಡೌನ್‌ ಪ್ರಕ್ರಿಯೆ ಹೇಗಿತ್ತು..?
ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್‌ ಫ್ಲೋರಿಡಾದ ಸಮುದ್ರದ ಮೇಲೆ ಟಚ್‌ಡೌನ್‌ ಆಗಿದೆ. ಆಕಾಶದಿಂದ ವೇಗವಾಗಿ ಬರುವ ಕ್ಯಾಪ್ಸೂಲ್‌ ನಿಧಾನವಾಗಿ ಲ್ಯಾಂಡ್‌ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್‌ನಲ್ಲಿರುವ 4 ಪ್ಯಾರಾಚೂಟ್‌ಗಳು ತೆರೆದುಕೊಂಡಿತ್ತು. ಈ ಪ್ಯಾರಾಚೂಟ್‌ಗಳು ಕ್ಯಾಪ್ಸೂಲ್‌ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್‌ ನಿಧನವಾಗಿ ಸಮುದ್ರದಲ್ಲಿ ಟಚ್‌ಡೌನ್‌ ಆಯ್ತು.

ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್‌ ಎಕ್ಸ್‌ ಸಿಬ್ಬಂದಿ ನೌಕೆಯನ್ನು ರೋಪ್‌ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್‌ ಬಳಿ ತಂದರು. ಈ ನೌಕೆಯನ್ನು ಕ್ರೇನ್‌ ಬಳಸಿ ಬೋಟ್‌ ಒಳಗಡೆ ಇಡಲಾಯಿತು. ಬೋಟ್‌ ಒಳಗಡೆ ಇಟ್ಟ ನಂತರ ಕ್ಯಾಪ್ಸೂಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್‌ ಎಕ್ಸ್‌ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ವಿಶೇಷವಾಗಿ ವಿನ್ಯಾಸ ಪಡಿಸಲಾಗಿರುವ ವೀಲ್‌ ಚೇರ್‌ನಲ್ಲಿ ಕುಳ್ಳಿರಿಸಿದರು.

ಬಾಹ್ಯಾಕಾಶ ಕೇಂದ್ರದಲ್ಲಿ ಸುದೀರ್ಘ ವಾಸದ ದಾಖಲೆ ಬರೆದ 2ನೇ ಗಗನಯಾತ್ರಿ
ಸುನೀತಾ ವಿಲಿಯಮ್ಸ್ ಒಟ್ಟು 606 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ, ಬಾಹ್ಯಾಕಾಶದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳಿಂದಾಗಿ 2024 ಸ್ಟಾರ್‌ಲೈನರ್ ಮಿಷನ್ ಅನ್ನು ಹೆಚ್ಚುವರಿಯಾಗಿ 284 ದಿನಗಳವರೆಗೆ ವಿಸ್ತರಿಸಲಾಯಿತು, ಇದು ಅವರ ದಾಖಲೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅವರ ವೃತ್ತಿಜೀವನದುದ್ದಕ್ಕೂ, ವಿಲಿಯಮ್ಸ್ ನಾಲ್ಕು ಬಾಹ್ಯಾಕಾಶ ಹಾರಾಟಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕೆಲವು ಮಹತ್ವದ ಸಂಶೋಧನೆ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿದ್ದಾರೆ. ಅವರ ಕೆಲಸ, ವಿಶೇಷವಾಗಿ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ, ಅವರನ್ನು ನಾಸಾದ ಪ್ರಮುಖ ವ್ಯಕ್ತಿಯಾಗಿ ಗುರುತಿಸುತ್ತದೆ.

ವಿಲಿಯಮ್ಸ್ ಅವರ ಮೂರನೇ ಬಾಹ್ಯಾಕಾಶ ಹಾರಾಟ
1965ರ ಸೆಪ್ಟೆಂಬರ್ 19ರಂದು ಓಹಿಯೋದ ಯೂಕ್ಲಿಡ್ ನಲ್ಲಿ ಜನಿಸಿದ ವಿಲಿಯಮ್ಸ್, ಮೆಕ್ಸಾನಾ ಜಿಲ್ಲೆಯ ಜುಲಾಸನ್ ಮೂಲದ ಗುಜರಾತಿ ತಂದೆ ದೀಪಕ್ ಪಾಂಡ್ಯ ಮತ್ತು ಫ್ಲೋವೇನಿಯನ್ ತಾಯಿ ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗೆ ಜನಿಸಿದರು.ತನ್ನ ಬಹುಸಂಸ್ಕೃತಿಯ ಬೇರುಗಳ ಬಗ್ಗೆ ಹೆಮ್ಮೆ ಪಡುವ ವಿಲಿಯಮ್ಸ್ ತನ್ನ ಪರಂಪರೆಯ ಸಂಕೇತಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದಾರೆ. ಹಿಂದಿನ ಕಾರ್ಯಾಚರಣೆಗಳಲ್ಲಿ ಸಮೋಸಾ, ಸೊವೇನಿಯನ್ ಧ್ವಜ ಮತ್ತು ಗಣೇಶ ವಿಗ್ರಹವನ್ನು ಅವರು ತಮ್ಮ ಜತೆ ಕೊಂಡೊಯ್ದಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ಬುಚ್ ವಿಲೋರ್ ಅವರೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಮೂರನೇ ಕಾರ್ಯಾಚರಣೆಯಲ್ಲಿ ವಿಲಿಯಮ್ಸ್ ಅವರು 286 ದಿನಗಳ ಕಾಲ ಬಾಹ್ಯಾಕಾಶ ನಡಿಗೆಯಲ್ಲಿ ಹೆಚ್ಚು ಸಮಯ ಕಳೆದ ದಾಖಲೆಯನ್ನು ನಿರ್ಮಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ವಿಲಿಯಮ್ಸ್ ಈಗ 62 ಗಂಟೆ 9 ನಿಮಿಷಗಳ ಹೆಚ್ಚುವರಿ ವಾಹನ ಚಟುವಟಿಕೆಯನ್ನು ಹೊಂದಿದ್ದಾರೆ. ಇದು ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಲನ್ ಅವರ 60 ಗಂಟೆ 21 ನಿಮಿಷಗಳ ದಾಖಲೆಯನ್ನು ಮೀರಿಸಿದೆ. ಇದು ಜನವರಿ 30 ರಂದು ವಿಲಿಯಮ್ಸ್ ಸಾಧಿಸಿದ ಸಾಧನೆಯಾಗಿದೆ.

ವಿಲೋರ್ ಮತ್ತು ವಿಲಿಯಮ್ಸ್ ನೌಕಾಪಡೆಯ ಪರೀಕ್ಷಾ ಪೈಲಟ್‌ಗಳು. ಬಳಿಕ ಇವರು ನಾಸಾಕ್ಕೆ ಸೇರಿದ್ದರು. 62 ವರ್ಷದ ವಿಲೋರ್ ಟೆನ್ನೆಸ್ಸಿಯಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ಫುಟ್‌ಬಾಲ್ ಆಟಗಾರರಾಗಿದ್ದರು. 59 ವರ್ಷದ ಸುನಿತಾ ವಿಲಿಯಮ್ಸ್ ಮ್ಯಾಸಚೂಸೆಟ್ಸ್‌ನ ನೀಡಮ್‌ನಲ್ಲಿ ಈಜುಗಾರ್ತಿ ಮತ್ತು ಲಾಂಗ್ ರೇಸರ್. ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಇಂಟರ್ನೆಟ್ ಕರೆಗಳ ಮೂಲಕ ತನ್ನ ಪತಿ, ತಾಯಿ ಮತ್ತು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದರು. ತನ್ನ ಆರೋಗ್ಯದ ಬಗ್ಗೆ ಇವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು.

ಸುನಿತಾ ವಿಲಿಯಮ್ಸ್-ಬುಚ್ ವಿಲ್ಮೋರ್ ಸಿಗುವ ವೇತನ ಎಷ್ಟು?
ಹಾಗಾದರೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯಲು ಎಷ್ಟು ಖರ್ಚು ತಗುಲಿತು ಎಂದು ನೋಡುವುದಾದರೆ, ಸಿಎನ್‌ಬಿಸಿ ವರದಿ ಮಾಡಿರುವಂತೆ, ನಾಸಾದ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಕಾರ, ಗಗನಯಾತ್ರಿಗಳು ಈ ಸಮಯದಲ್ಲಿ ಕೂಡ ತಮ್ಮ ಎಂದಿನ ನಿಗದಿತ ವೇತನ ಪಡೆದಿದ್ದಾರೆ. ಯಾವುದೇ ಹೆಚ್ಚುವರಿ ವೇತನ ಪಡೆದಿಲ್ಲ.

ಉದ್ಯಮ ಪ್ರವಾಸದಲ್ಲಿರುವ ಯಾವುದೇ ಫೆಡರಲ್ ಉದ್ಯೋಗಿಯಂತೆ ಗಗನಯಾತ್ರಿಗಳಿಗೆ ವೇತನ ನೀಡಲಾಗುತ್ತದೆ. ಅವರಿಗೆ ನಿಯಮಿತ ಸಂಬಳ ಸಿಗುತ್ತದೆ, 9 ತಿಂಗಳು ಬಾಹ್ಯಾಕಾಶದಲ್ಲಿದ್ದುದಕ್ಕೆ ಪ್ರತಿದಿನಕ್ಕೆ ಸಣ್ಣಮೊತ್ತ ನೀಡಲಾಗಿದೆ. ತಮಗೆ ಪ್ರತಿದಿನಕ್ಕೆ 4 ಡಾಲರ್ ನೀಡಿದ್ದರು. ನಾಸಾ ಗಗನಯಾತ್ರಿಗಳ ಸಾರಿಗೆ, ವಸತಿ ಮತ್ತು ಆಹಾರವನ್ನು ನೋಡಿಕೊಳ್ಳುತ್ತದೆ ಎಂದು ಕೋಲ್ಮನ್ ವಾಷಿಂಗ್ಟನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವರದಿಗಳ ಪ್ರಕಾರ, ವಿಲಿಯಮ್ಸ್ ಮತ್ತು ವಿಲ್ಮೋರ್ ಸಾಮಾನ್ಯ ವೇತನ ವೇಳಾಪಟ್ಟಿಯ ಅತ್ಯುನ್ನತ ಶ್ರೇಣಿಯಾದ GS-15 ಶ್ರೇಯಾಂಕವನ್ನು ಹೊಂದಿದ್ದಾರೆ, ಅವರ ಮೂಲ ವೇತನವು ವಾರ್ಷಿಕವಾಗಿ 125 ರಿಂದ 133 ಡಾಲರ್ ನಿಂದ 162,672 ಡಾಲರ್ ಆಗಿದೆ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.08 ಕೋಟಿ ರೂಪಾಯಿಗಳಿಂದ 1.41 ಕೋಟಿ ರೂಪಾಯಿಗಳ ನಡುವೆ ಇರುತ್ತದೆ ಎಂದು generalschedule.org ತಿಳಿಸಿದೆ.

ಈ ಇಬ್ಬರು ಗಗನಯಾತ್ರಿ ಜೋಡಿಯ ಅನುಪಾತದ ವೇತನವು 93,850 ಡಾಲರ್ ನಿಂದ 122,004 ಡಾಲರ್ ಗೆ (ಸುಮಾರು ರೂ. 81 ಲಕ್ಷದಿಂದ ರೂ. 1.05 ಕೋಟಿ) ವರೆಗೆ ಇರುತ್ತದೆ. 1,148 ಡಾಲರ್ ಪ್ರಾಸಂಗಿಕ ವೇತನವನ್ನು ಸೇರಿಸಿದರೆ, ಅವರ ಒಟ್ಟು ಗಳಿಕೆ 94,998 ಡಾಲರ್ ಮತ್ತು 123,152 ಡಾಲರ್ (ಸುಮಾರು 82 ಲಕ್ಷದಿಂದ ರೂ. 1.06 ಕೋಟಿ) ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆಹಾರ
ಕಳೆದ ವರ್ಷ ನವೆಂಬರ್ 18 ರಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ ಪ್ರಕಾರ ನಾಸಾ ಗಗನಯಾತ್ರಿಗಳಾದ ಬುಚ್ ವಿಲೋರ್ ಮತ್ತು ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಪಿಜ್ಜಾ, ಹುರಿದ ಕೋಳಿಮಾಂಸ ಮತ್ತು ಸೀಗಡಿ ಕಾಕ್‌ಟೇಲ್‌ಗಳನ್ನು ತಿನ್ನುತ್ತಿದ್ದರು ಎಂದು ವರದಿ ಮಾಡಿತ್ತು. ಗಗನಯಾನಿಗಳು ತಿನ್ನುವ ಆಹಾರಕ್ಕೂ ಭೂಮಿಯಲ್ಲಿ ನಾವು ತಿನ್ನುವ ಆಹಾರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಗುರುತ್ವವಿಲ್ಲದ ಅಂತರಿಕ್ಷ ನಿಲ್ದಾಣದಲ್ಲಿ ಬದುಕುಳಿಯುವ ಉದ್ದೇಶದಿಂದ ಆಹಾರ ಸೇವನೆ ಮಾಡಲಾಗುತ್ತದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.

ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನೆಲೆಯಿಂದ ಮಾರ್ಚ್‌ 15 ರಂದು ಕ್ರ್ಯೂ ಡ್ರ್ಯಾಗನ್‌ ಕ್ಯಾಪ್ಸೂಲ್ (Crew Dragon Capsule) ಹೊತ್ತುಕೊಂಡು ಫಾಲ್ಕನ್‌-9 ರಾಕೆಟ್‌ ಹಾರಿತ್ತು. ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಕ್ರ್ಯೂ ಡ್ರ್ಯಾಗನ್‌ ತಲುಪಿತ್ತು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) :
ಭೂಮಿಯಿಂದ 254 ಮೈಲುಗಳು (409 ಕಿ.ಮೀ) ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿ ಇವರು ಕಾಲ ಕಳೆದಿದ್ದಾರೆ. ಈ ನಿಲ್ದಾಣವು ಸುಮಾರು 25 ವರ್ಷಗಳಿಂದ ಜಗತ್ತಿನಾದ್ಯಂತ ಇರುವ ಗಗನಯಾತ್ರಿಗಳಿಗೆ ಆತಿಥ್ಯ ವಹಿಸಿದೆ. ಯುಎಸ್ ಮತ್ತು ರಷ್ಯಾದ ಈ ಫುಟ್ಬಾಲ್ ಮೈದಾನದ ಗಾತ್ರದ ಸಂಶೋಧನಾ ಪ್ರಯೋಗಾಲಯದಲ್ಲಿ ವಾಸಿಸುವುದು ಅಂದುಕೊಂಡಷ್ಟು ಸುಲಭವಲ್ಲ.

error: Content is protected !!