Mixtures – ಮಿಶ್ರಣಗಳು

Mixtures – ಮಿಶ್ರಣಗಳು

Mixtures : ಎರಡು ಅಥವಾ ಹೆಚ್ಚಿನ ಮೂಲವಸ್ತುಗಳು ಭೌತಿಕವಾಗಿ ಬೆರೆಯುವುದರಿಂದ ಮಿಶ್ರಣಗಳು ಉಂಟಾಗುತ್ತವೆ. ಆದರೆ ಮಿಶ್ರಣದಲ್ಲಿರುವ ವಸ್ತುಗಳು ತಮ್ಮ ಗುಣಗಳನ್ನು ಕಳೆದುಕೊಂಡಿರುವುದಿಲ್ಲ.
ಉದಾ : ಧಾನ್ಯಗಳು ಸಸ್ಯಗಳಲ್ಲಿದ್ದಾಗ ಶುದ್ಧವಾಗಿರುತ್ತದೆ. ಆದರೆ ಇವುಗಳನ್ನು ಹುಲ್ಲಿನಿಂದ ಬೇರ್ಪಡಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಧೂಳು, ಮಣ್ಣು, ಕಸ, ಕಲ್ಲು, ಕ್ರಿಮಿ- ಕೀಟಗಳು ಮಿಶ್ರಣಗೊಂಡಿರುತ್ತವೆ.

• ಮಿಶ್ರಣದ ಘಟಕಗಳನ್ನು ಬೇರ್ಪಡಿಸುವ ವಿಧಾನಗಳು

1. ಕೈಗಳಿಂದ ಆರಿಸುವುದು :
ಈ ವಿಧಾನದಲ್ಲಿ ವಸ್ತುಗಳನ್ನು ಅವುಗಳ ಬಣ್ಣ, ಆಕಾರ ಮತ್ತು ಗಾತ್ರಗಳ ಆಧಾರದಿಂದ ಬೇರ್ಪಡಿಸಲಾಗುತ್ತದೆ. ಉದಾ: ಪ್ರತಿದಿನ ನಾವು ಅಕ್ಕಿ, ರಾಗಿ, ಜೋಳ, ಗೋಧಿ ಮುಂತಾದ ಆಃಆರ ಪದಾರ್ಥಗಳಲ್ಲಿರುವ ಕಲ್ಲು, ಮಣ್ಣಿನ ಹೆಂಟೆಗಳು, ಹುಲ್ಲಿನ ಬೀಜಗಳು , ಕಡ್ಡಿಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ.

2. ಜರಡಿ ಹಿಡಿಯುವುದು :
ಈ ವಿಧಾನದಲ್ಲಿ ಜರಡಿಯನ್ನು ಬಳಸಲಾಗುತ್ತದೆ. ಜರಡಿಗಳ ಬಳಕೆಯಿಂದ ಆಹಾರದಾನ್ಯಗಳನ್ನು ಶುದ್ಧಗೊಳಿಸಬಹುದು. ಜರಡಿಗಳ ಬಳಕೆಯಿಂದ ಸಣ್ಣ ದಪ್ಪ ಕಾಳುಗಳನ್ನು ಬೇರ್ಪಡಿಸಬಹುದು. ಸಣ್ಣ ಸಣ್ಣ ಕಲ್ಲು ಹಾಗೂ ಹೊಟ್ಟನ್ನೂ ಬೇರ್ಪಡಿಸಬಹುದು.

3. ಬಡಿಯುವುದು :
ಈ ವಿಧಾನವನ್ನು ಆಹಾರ ಪದಾರ್ಥಗಳನ್ನು ಅವುಗಳ ಸಸ್ಯಗಳಿಂದ ಬೇರ್ಪಡಿಸಲು ಬಳಸುತ್ತಾರೆ. ಉದಾ : ರಾಗಿ, ಭತ್ತ, ಗೋಧಿ, ಧನಿಯಾ, ತೊಗರಿ ಕಾಳು, ಅವರೆ ಕಾಳು ಮುಂತಾದ ಆಹಾರ ಪದಾರ್ಥಗಳನ್ನು ಅವುಗಳ ಕಾಯಿ ಸಸ್ಯಗಳಿಂದ ಬೇರ್ಪಡಿಸಲು ಈ ವಿಧಾನ ಸೂಕ್ತವಾಗಿದೆ. ಚೆನ್ನಾಗಿ ಒಣಗಿಸಿದ ನಂತರ ಬಡಿಯುವದರಿಂದ ಕಾಳುಗಳು ಅವುಗಳ ತೆನೆ, ಕಾಯಿಗಳಿಂದ ಬೇರ್ಪಡುತ್ತವೆ. ಇದಲ್ಲದೆ ಕೆಲವು ಕಡೆ ಕೊಯ್ದ ಪೈರಿನ ಮೇಲೆ ಭಾರವಾದ ಗುಂಡು ಕಲ್ಲನ್ನು ಸತತವಾಗಿ ಓಡಿಸುವುದರಿಂದಲೂ ಧಾನ್ಯಗಳನ್ನು ಬೇರ್ಪಡಿಸುವರು.

4. ತೂರುವುದು :
ಈ ವಿಧಾನವನ್ನು ಹಗುರ ಮತ್ತು ಭಾರವಾದ ಕಣಗಳನ್ನು ಬೇರ್ಪಡಿಸಲು ಬಳಸುತ್ತಾರೆ. ಉದಾ: ಧಾನ್ಯಗಳನ್ನು, ಕಾಳುಗಳನ್ನು ಬಡಿಯುವುದರ ಮೂಲಕ ಸಸ್ಯದಿಂದ ಬೇರ್ಪಡಿಸುತ್ತಾರೆ. ಆದರೆ ಆ ಕಾಳುಗಳಲ್ಲಿ ಹುಲ್ಲಿನ ಗರಿಗಳು, ಹೊಟ್ಟು, ಕಾಳುಗಳು ಇರುತ್ತವೆ. ಇದನ್ನು ಗಾಳಿಗೆ ತೂರಿದಾಗ ಭಾರವಾದ ಗಟ್ಟಿ ಕಾಳುಗಳು ಅಲ್ಲಿಯೇ ಬೀಲುತ್ತವೆ. ಆದರೆ ಹಗುರವಾದ ಜೊಳ್ಳು ಕಾಳುಗಳು ಹುಲ್ಲಿನ ಗರಿಗಳು, ಹೊಟ್ಟು ಮುಂತಾದವು ಗಾಳಿಯೊಂದಿಗೆ ಮುಂದೆ ಹೋಗುತ್ತವೆ.

5. ಬಸಿಯುವಿಕೆ :
ದ್ರವದಲ್ಲಿ ಇರುವ ಕರಗದ ಭಾರವಾದ ಕಣಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಉದಾ : ಟೀ ಮತ್ತು ಕಾಫಿ ತಯಾರಿಸುವಾಗ ಅವುಗಳನ್ನು ಬಸಿಯಲಾಗುತ್ತದೆ. ಅಡಿಗೆ ಮಾಡುವಾಗ ತರಕಾರಿ ಮತ್ತು ಧಾನ್ಯಗಳನ್ನು ತೊಳೆಯುವುದರಿಂದ ಹಗುರವಾದ ಕಶ್ಮಲಗಳನ್ನು ಬೇರ್ಪಡಿಸುವರು.

6. ಶೋಧಿಸುವುದು :
ಕರಗದಿರುವ ಸಣ್ಣ ಕಣಗಳನ್ನು ಶೋಧಿಸುವುದರಿಂದ ಬೇಪ್ಡಿಸಬಹುದು,. ಕೆಲವು ಬಾರಿ ನೀರಿನಲ್ಲಿ ಮರಳು, ಧೂಳು ಸೇರಿರುವ ಸಂಭವವಿರುತ್ತವೆ. ಇದರಿಂದಾಗಿ ನೀರನ್ನು ಶುದ್ಧೀಕರಿಸಲು ಪ್ರಯೋಗಶಾಲೆಯಲ್ಲಿ ಶೋಧನಾ ಪತ್ರ ಉಪಯೋಗಿಸಿ ಶುದ್ಧ ನೀರನ್ನು ಪಡೆಯಬಹುದಾಗಿದೆ.

7. ಇಂಗಿಸುವುದು :
ಈ ವಿಧಾನವನ್ನು ಕರಗುವಿಕೆಯ ಆಧಾರದ ಮೇಲೆ ಅಳವಡಿಸಲಾಗಿದೆ. ನೀರಿನಲ್ಲಿ ಸಕ್ಕರೆ, ಉಪ್ಪು, ಬೆಲ್ಲ ಮುಂತಾದ ವಸ್ತುಗಳು ಕರಗಿದಾಗ ದ್ರಾವಣ ಉಂಟಾಗುತ್ತದೆ. ಇಂತಹ ದ್ರಾವಣದಲ್ಲಿ ಕರಗಿರುವ ವಸ್ತುವನ್ನು ಅದರಲ್ಲಿರುವ ನೀರನ್ನು ಆವಿಯಾಗಿಸುವ ಮೂಲಕ ಬೇರ್ಪಡಿಸಬಹುದು. ಈ ವಿಧಾನಕ್ಕೆ ‘ಬಾಷ್ಪೀಭವನ ಅಥವಾ ಇಂಗಿಸುವುದು’ ಎಂದು ಕರೆಯುತ್ತಾರೆ, ಸಮುದ್ರದ ನೀರಿನಿಂದ ಉಪ್ಪನ್ನು ಪಡೆಯಲು ಇದೇ ವಿಧಾನವನ್ನು ಅನುಸರಿಸುತ್ತಾರೆ.

8. ಭಟ್ಟಿಇಳಿಸುವುದು :
ಅತ್ಯಂತ ಶುಧ್ಧವಾದ ನೀರನ್ನು ಪಡೆಯುವ ವಿಧಾನವಾಗಿದೆ. ನೀರಿನಲ್ಲಿ ಕರಗಿರುವ ಎಲ್ಲಾ ಕಶ್ಮಲಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ನೀರನ್ನು ಕಾಯಿಸಿದಾಗ ಅದು ಕುದಿದು ಆವಿಯಾಗುತ್ತದೆ. ಆವಿಯನ್ನು ತಂಪುಮಾಡಿದಾಗ ದ್ರವರೂಪಕ್ಕೆ ಬರುತ್ತದೆ. ಈ ನೀರು ಅತ್ಯಂತ ಶುದ್ಧವಾಗಿರುತ್ತದೆ. ನೀರಿನಲ್ಲಿ ಕರಗಿದ ಮತ್ತು ಕರಗದಿರುವ ಎಲ್ಲಾ ರೀತಿಯ ಕಶ್ಮಲಗಳು ಅಲ್ಲಿಯೇ ಉಳಿದು ಶುದ್ಧ ನೀರು ಮಾತ್ರ ಆವಿಯಾಗುತ್ತದೆ.

9. ಉತ್ಪತನ :
ಘನವಸ್ತುಗಳಿಗೆ ಶಾಖ ಕೊಟ್ಟಾಗ ಅವು ದ್ರವರೂಪಕ್ಕೆ , ದ್ರವವನ್ನು ತಂಪುಮಾಡಿದಾಗ ಘನರೂಪಕ್ಕೆ ಬದಲಾಗುತ್ತದೆ. ಆದರೆ ,ಏಲಿನ ಕ್ರಿಯೆಗೆ ಅಪವಾದವಾಗಿ ಕೆಲವು ಘನ ವಸ್ತುಗಳು ಶಾಖದಿಂದ ದ್ರವರೂಪಕ್ಕೆ ಬಾರದೆ ನೇರವಾಗಿ ಅನಿಲರೂಪಕ್ಕೆ ಬರುತ್ತವೆ. ಇಂತಹ ಅನಿಲವಸ್ತುಗಳನ್ನು ತಂಪು ಮಾಡಿದಾಗ ದ್ರವರೂಪಕ್ಕೆ ಬಾರದೆ ನೇರವಾಗಿ ಘನರೂಪಕ್ಕೆ ಬರುತ್ತವೆ. ಈ ಕ್ರಿಯೆಯನ್ನು ‘ ಉತ್ಪತನ’ ಎನ್ನುವರು. ಇಂತಹ ವಸ್ತುಗಳಿಗೆ ಉತ್ಪತನ ಹೊಂದುವ ವಸ್ತುಗಳು ಎನ್ನುತ್ತಾರೆ.
ಉದಾ: ಕರ್ಪೂರ, ಅಯೋಡಿನ್,ನುಸಿಗುಳಿಗೆ, ಒಣಹಿಮ ಇತ್ಯಾದಿ.

10. ಸಾಂದ್ರತೆ ಆಧಾರದ ಮೇಲೆ ದ್ರವಗಳನ್ನು ಬೇರ್ಪಡಿಸುವಿಕೆ :
ಎಣ್ಣೆಯೊಂದಿಗೆ ನೀರು ಬೆರೆತಿದ್ದರೆ ಅಂತಹ ಮಿಶ್ರಣವನ್ನು ಸಾಂದ್ರತೆ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ. ಎಣ್ಣೆ ಮತ್ತು ನೀರಿನ ಮಿಶ್ರಣದಲ್ಲಿ ಎಣ್ಣೆ ಸಾಂದ್ರತೆ ನೀರಿಗಿಂತ ಕಡಿಮೆ ಇರುವುದರಿಂದ ಎಣ್ಣೆ ನೀರಿನ ಮೇಲೆ ತೇಲುತ್ತದೆ. ಈ ವಿಧಾನದಲ್ಲಿ ಇದನ್ನು ಬೇರ್ಪಡಿಸಬಹುದು.

11. ಕಾಂತ ಶಕ್ತಿಯಿಂದ ಬೇರ್ಪಡಿಸುವಿಕೆ :
ಮಿಶ್ರಣವೊಂದರಲ್ಲಿ ಕಾಂತದಿಂದ ಆಕರ್ಷಿಸಲ್ಪಡುವ ಕಬ್ಬಿಣ, ನಿಕ್ಕಲ್, ಕೋಬಾಲ್ಟ್, ಆಲ್ನೀಕೋ ಮುಂತಾದ ಕಾಂತೀಯ ವಸ್ತುಗಳಿದ್ದರೆ ಅದನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ.
ಉದಾ: ಮಣ್ಣಿನಲ್ಲಿರುವ ಕಬ್ಬಿಣದ ಚೂರುಗಳನ್ನು ಈ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಕಾಂತದಿಂದ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಟ್ಟು ಮಣ್ಣಿನಿಂದ ಬೇರ್ಪಡುತ್ತವೆ.

12. ಆಂಶಿಕ ಆಸವನ ( ಭಟ್ಟಿ ಇಳಿಸುವಿಕೆ) :
ದ್ರಾವಣವೊಂದರಲ್ಲಿ ಬೇರೆ ಬೇರೆ ಕುದಿಬಿಂದುಗಳನ್ನು ಹೊಂದಿರುವ ವಿವಿಧ ಘಟಕಗಳನ್ನು ಬೇರ್ಪಡಿಸಲು ಈ ವಿಧಾನವನ್ನು ಬಳಸುತ್ತಾರೆ.
ಉದಾ: ಪೆಟ್ರೋಲಿಯಂ ( ಕಚ್ಚಾತೈಲ)ವನ್ನು ಕಾಯಿಸಿದಾಗ ಅದರಲ್ಲಿಯ ಪೆಟ್ರೋಲ್, ಡೀಸಲ್ ಸೀಮೆಎಣ್ಣೆ ಘಟಕಗಳು ವಿವಿಧ ಉಷ್ಣತೆಗಳಲ್ಲಿ ಆವಿಯಾಗುತ್ತದೆ. ನೀರು ಮತ್ತು ಮಧ್ಯಸಾರವನ್ನು ಬೇರ್ಪಡಿಸುವ ವಿಧಾನವಾಗಿದೆ.