ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)

ಭಾರತೀಯ ಸಂವಿಧಾನದ ತಿದ್ದುಪಡಿ ಯು ಭಾರತದ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡುವ ಕಾರ್ಯವಿಧಾನವಾಗಿದೆ. ಈ ಬದಲಾವಣೆಗಳನ್ನು ಭಾರತದ ಪಾರ್ಲಿಮೆಂಟ್ ಮಾಡುತ್ತದೆ. ಆ ತಿದ್ದುಪಡಿಗಳು ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಶ್ರೇಷ್ಠ-ಬಹುಮತದಿಂದ ಅಂಗೀಕೃತವಾಗಬೇಕು, ಹಾಗೂ ಕೆಲವು ತಿದ್ದುಪಡಿಗಳನ್ನು ರಾಜ್ಯಗಳೂ ಒಪ್ಪಿದನಂತರವೇ ಅಳವಡಿಸಲು ಅನುಮತಿಸಲಾಗುವುದು. ಈ ಕಾರ್ಯವಿಧಾನವು ಸಂವಿಧಾನದ ಭಾಗ ಘಿಘಿ, ಕಲಂ 368 ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಈ ನಿಯಮಗಳಿದ್ದೂ ಸಹ 1950ರಲ್ಲಿ ಸಂವಿಧಾನವು ಜಾರಿಗೆ ಬಂದಂದಿನಿಂದ ಇಂದಿನವರೆಗೆ 90ಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಭಾರತದ ಸರ್ವೋಚ್ಛ ನ್ಯಾಯಾಲಯವು ‘ಮಂಡಿತವಾದ ಪ್ರತಿ ಸಂವಿಧಾನದ ತಿದ್ದುಪಡಿಯೂ ಅಂಗೀಕೃತವಾಗಲೇಬೇಕೆಂದೇನಿಲ್ಲ’ ಎಂಬ ವಿವಾದಾತ್ಮಕವಾದ ತೀರ್ಪೊಂದನ್ನು ನೀಡಿದೆ. ತಿದ್ದುಪಡಿಯು ಸಂವಿಧಾನದ “ಮೂಲ ನಿರ್ಮಾಣ”ಕ್ಕೆ ಧಕ್ಕೆ/ಚ್ಯುತಿ ಉಂಟುಮಾಡದಂತಿರಬೇಕು ಹಾಗೂ ಈ ಮೂಲ ನಿರ್ಮಾಣವು ಬದಲಾಯಿಸತಕ್ಕುದಲ್ಲ.

# ಕಾರ್ಯವಿಧಾನ: 
ತಿದ್ದುಪಡಿಗೊಳಗಾಗಬೇಕಾದ ವಿಷಯವನ್ನು ಪಾರ್ಲಿಮೆಂಟಿನಲ್ಲಿ ಬಿಲ್ ಆಗಿ ಮುಂದಿಡಲಾಗುತ್ತದೆ. ನಂತರ ಅದನ್ನು ಪಾರ್ಲಿಮೆಂಟಿನ ಎರಡೂ ಸದನಗಳು ಅಂಗೀಕರಿಸಬೇಕಾಗುತ್ತದೆ. ಈ ಬಿಲ್ ಅನ್ನು ಎರಡೂ ಸದನಗಳಲ್ಲಿ (1)ಹಾಜರಿದ್ದು, ಮತ ನೀಡಿದರ ಮೂರನೆಯ ಎರಡರಷ್ಟು ಬೆಂಬಲ ದೊರೆಯಬೇಕು ಮತ್ತು (2)ಎಲ್ಲಾ ಸದಸ್ಯರ (ಹಾಜರಿರಲಿ, ಇಲ್ಲದಿರಲಿ) ಸರಳ ಬಹುಮತದ ಬೆಂಬಲ ದೊರೆಯಬೇಕು. ಕೆಲವು ತಿದ್ದುಪಡಿಗಳನ್ನು ನಂತರ ಕಡೆಯಪಕ್ಷ ಇರುವ ರಾಜ್ಯಗಳಲ್ಲಿ ಅರ್ಧದಷ್ಟಾದರೂ ರಾಜ್ಯಗಳ ಸಚಿವರು ಒಪ್ಪಬೇಕು. ಈ ಎಲ್ಲಾ ಹಂತಗಳು ಮುಗಿದನಂತರ ಅಂತಹ ತಿದ್ದುಪಡಿಯು ಭಾರತದ ರಾಷ್ಟ್ರಪತಿಯ ಒಪ್ಪಿಗೆಯನ್ನು ಪಡೆಯುತ್ತದೆ, ಆದರೆ ಈ ಕೊನೆಯ ಹಂತ ಕೇವಲ ಔಪಚಾರಿಕವಷ್ಟೆ.

ಸಂವಿಧಾನದಲ್ಲಿ ಶ್ರೇಷ್ಠ-ಬಹುಮತವಿರಬೇಕೆಂಬ ನಿಯಮವಿದ್ದರೂ ಸಹ ಇದು ಜಗತ್ತಿನಲ್ಲೇ ಬಹಳ ತಿದ್ದುಪಡಿಗಳನ್ನು ಕಂಡಂತಹ ಸರ್ಕಾರಿ ದಸ್ತಾವೇಜಾಗಿದೆ; ಪ್ರತಿ ವರ್ಷವೂ ಸರಾಸರಿ ಎರಡು ತಿದ್ದುಪಡಿಗಳಿಗೆ ಭಾರತದ ಸಂವಿಧಾನವು ಒಳಗಾಗಿದೆ. ಇದಕ್ಕೆ ಸಂವಿಧಾನದ ಸುದೀರ್ಘತೆ ಮತ್ತು ವಿವರಣೆಗಳೂ ಭಾಗಶಃ ಕಾರಣವಾಗಿವೆ. ಇದು ಜಗತ್ತಿನ ಯಾವುದೇ ಶ್ರೇಷ್ಠ ದೇಶದ ಸಂವಿಧಾನಗಳಿಗಿಂತಲೂ ಬಹಳವೇ ದೀರ್ಘವಾದುದಾಗಿದ್ದು ಇದರಲ್ಲಿ 390 ಕಲಂಗಳು ಹಾಗೂ 117,000 ಪದಗಳಿವೆ. ಈ ದಸ್ತಾವೇಜು ಸರ್ಕಾರದ ಇತಿಮಿತಿಗಳನ್ನು ಸ್ಪಷ್ಟವಾಗಿ ನಿರ್ದೇಶಿಸುವುದರಿಂದ, ಬೇರೆ ದೇಶಗಳಲ್ಲಿ ಸಾಮಾನ್ಯ ಕಟ್ಟಳೆಗಳ ಮೂಲಕ ಬಗೆಹರಿಸಬಹುದಾದ ವಿಷಯಗಳನ್ನು, ಇಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗಳು ಆಗಾಗ್ಗೆ ಅಗತ್ಯವಾಗುತ್ತವೆ.

ಭಾರತದಲ್ಲಿ ಪ್ರತಿ ಸಂವಿಧಾನದ ತಿದ್ದುಪಡಿಗೂ ಕಟ್ಟಳೆಯ ರೂಪ ನೀಡಲಾಗುತ್ತದೆ. ಮೊದಲನೆಯ ತಿದ್ದುಪಡಿಯನ್ನು “ಸಂವಿಧಾನ (ಮೊದಲ ತಿದ್ದುಪಡಿ) ಕಾಯಿದೆ”, ಎರಡನೆಯ ತಿದ್ದುಪಡಿಯನ್ನು, “ಸಂವಿಧಾನ (ಎರಡನೆಯ ತಿದ್ದುಪಡಿ) ಕಾಯಿದೆ”, ಹಾಗೂ ಇದೇ ಕ್ರಮಗಳಲ್ಲಿ ಕರೆಯಲಾಗುತ್ತದೆ. ಪ್ರತಿ ತಿದ್ದುಪಡಿಯೂ ಸಾಮಾನ್ಯವಾಗಿ ಈ ದೀರ್ಘ ತಲೆಬರಹ ಹೊಂದಿರುತ್ತದೆ “ಈ ಕಾಯಿದೆ, ಸಂವಿಧಾನವನ್ನು ತಿದ್ದುಪಡಿಗೊಳಿಸಲು ಮಂಡಿಸಲಾಗಿದೆ”.

# ಭಾರತದ ಸಂವಿಧಾನದ  ಪ್ರಮುಖ ತಿದ್ದುಪಡಿಗಳು : 

➤ ಸಂವಿಧಾನ ( 1 ನೇ ತಿದ್ದುಪಡಿ) ಮಸೂದೆ, 1950
ಈ ತಿದ್ದುಪಡಿಯು ಸಂವಿಧಾನದ ವಿಧಿ 19 ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಯಾವುದೆ ವೃತ್ತಿಯನ್ನು ನಡೆಸುವ ಅಥವಾ ಯಾವುದೇ ವಾಣಿಜ್ಯ ಅಥವಾ ವ್ಯವಹಾರದಲ್ಲಿ ತೊಡಗುವ ಮೂಲಭೂತ ಹಕ್ಕಿನ ಮೇಲೆ ಹಲವಾರು ಹೊಸ ಆಧಾರಗಳ ಮೇರೆಗೆ ಮಿತಿಯನ್ನು ಹೇರಿದೆ.

➤ ಸಂವಿಧಾನ ( 7 ನೆ ತಿದ್ದುಪಡಿ) ಮಸೂದೆ, 1956
ಈ ತಿದ್ದುಪಡಿಯ ಮೂಲಕ ಭಾಷಾವಾರು ಪ್ರಾಂತದ ಆಧಾರದ ಮೇಲೆ ಇಡೀ ದೇಶವನ್ನು 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು.

➤ ಸಂವಿಧಾನ ( 10 ನೇ ತಿದ್ದುಪಡಿ) ಮಸೂದೆ, 1961
ಈ ತಿದ್ದುಪಡಿಯು ಹಿಂದೆ ಪೋರ್ಚುಗೀಸರ ಅಧಿನದಲ್ಲಿದ್ದ ದಾದ್ರ ಮತ್ತು ನಗರ ಹವೇಲಿಯನ್ನು ಭಾರತದ ಸಾರ್ವಭೌಮತ್ವಕ್ಕೆ ಒಳಪಡಿಸಿ, ರಾಷ್ಟ್ರಪತಿಯವರು ಆಡಳಿತ ನಡೆಸಲು ಅವಕಾಶ ಕಲ್ಪಿಸಿತು.

➤ ಸಂವಿಧಾನ ( 12 ನೇ ತಿದ್ದುಪಡಿ) ಮಸೂದೆ, 1962
12 ನೆ ತಿದ್ದುಪಡಿ ಮಸೂದೆಯು ಗೋವಾ, ಡಾಮನ್ ಮತ್ತು ಡಿಯುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಸಂವಿಧಾನದ 1 ನೇ ಪರಿಚ್ಛೇದದಲ್ಲಿ ಅಡಕ ಮಾಡಿತಲ್ಲದೆ ರಾಷ್ಟ್ರಪತಿಗಳಿಗೆ ಈ ಭೂಭಾಗಗಳ ಶಾಂತಿ, ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕೆ ಬೇಕಾದ ನೀತಿಗಳನ್ನು ರೂಪಿಸಲು ಅಧಿಕಾರ ನೀಡಿತು.

➤ ಸಂವಿಧಾನ ( 13 ನೇ ತಿದ್ದುಪಡಿ) ಮಸೂದೆ, 1962
ಈ ತಿದ್ದುಪಡಿಯು ನಾಗಾಲ್ಯಾಂಡನ್ನು ಭಾರತದ 16 ನೇ ರಾಜ್ಯವನ್ನಾಗಿ ರೂಪಿಸಿತು.

➤ ಸಂವಿಧಾನ ( 18 ನೇ ತಿದ್ದುಪಡಿ) ಮಸೂದೆ, 1966
ಈ ತಿದ್ದುಪಡಿಯು ಪಂಜಾಬ್ ಪ್ರದೇಶವನ್ನು ಭಾಷಾ ಆಧಾರದ ಮೇಲೆ ಪಂಜಾಬಿ ಭಾಷೆ ಮಾತನಾಡುವ ರಾಜ್ಯವಾಗಿ ಪಂಜಾಬನ್ನು ಮತ್ತು ಹಿಂದಿ ಮಾತನಡುವ ರಾಜ್ಯವಾಗಿ ಹರಿಯಾಣ ಎಂದು ಪುನರಚಿಸುವ ಅವಕಾಶ ಕಲ್ಪಿಸಿತು.

➤ ಸಂವಿಧಾನ ( 22 ನೇ ತಿದ್ದುಪಡಿ) ಮಸೂದೆ, 1969
ಈ ತಿದ್ದುಪಡಿಯು ಅಸ್ಸಾಂನ್ನು ಪುನರ್ರಚಿಸಿ ಮೇಘಾಲಯ ಎಂಬ ನೂತನ ರಾಜ್ಯವನ್ನು ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಿತು.

➤ ಸಂವಿಧಾನ ( 24 ನೇ ತಿದ್ದುಪಡಿ) ಮಸೂದೆ, 1971
ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ ಅಧಿಖಾರ ಕೋಕಸಭೆಗೆ ಇದೆ. ಲೋಕಸಭೆ ಹಾಗೂ ರಾಜ್ಯಸಭೆ ಉಭಯಸದನಗಳು ಅಂಗೀಕರಿಸಿದ ಯಾವುದೇ ಸಾಂವಿಧಾನಿಕ ತಿದ್ದುಪಡಿಯನ್ನು ಭಾರತದ ರಾಷ್ಟ್ರಪತಿಗಳು ಕಡ್ಡಾಯವಾಗಿ ಅನುಮೋದಿಸತಕ್ಕದ್ದು ಎಂದು ಈ ತಿದ್ದುಪಡಿ ಸಾರಿತು.

➤ ಸಂವಿಧಾನ ( 31 ನೇ ತಿದ್ದುಪಡಿ) ಮಸೂದೆ, 1973
ಈ ತಿದ್ದುಪಡಿಯು ಲೋಕಸಭೆಯ ಸದಸ್ಯರ ಗರಿಷ್ಠ ಸಂಖ್ಯೆಯನ್ನು 525 ರಿಂದ 545 ಕ್ಕೆ ಏರಿಸಿತು.

➤ ಸಂವಿಧಾನ ( 36 ನೇ ತಿದ್ದುಪಡಿ) ಮಸೂದೆ, 1975
ಈ ತಿದ್ದುಪಡಿಯು ಸಿಕ್ಕಿಂನ್ನು ಭಾರತ ಒಕ್ಕೂಟದ 22ನೇ ರಾಜ್ಯವನ್ನಾಗಿ ರಚಿಸಿತು.

➤ ಸಂವಿಧಾನ ( 42 ನೇ ತಿದ್ದುಪಡಿ) ಮಸೂದೆ 1976
ಸಮಾಜವಾದಿ , ಜಾತೈತೀತ ಮತ್ತು ಸಾರ್ವಭೌಮ ಎಂಬ ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದ ತಿದ್ದುಪಡಿ ಇದು. ಅಲ್ಲದೆ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು.

➤ ಸಂವಿಧಾನ ( 44 ನೇ ತಿದ್ದುಪಡಿ) ಮಸೂದೆ 1978
ತುರ್ತುಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ತನ್ನ ತಿರ್ಮಾನವನ್ನು ಲಿಖಿತವಾಗಿ ತಿಳಿಸದ ಹೊರತು ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ ಎಂದು ಈ ಮೂಲಕ ಸಾರಲಾಯಿತು. ಜೊತೆಗೆ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಯಿತು.

➤ ಸಂವಿಧಾನ ( 52 ನೇ ತಿದ್ದುಪಡಿ) ಮಸೂದೆ 1985
ಈ ತಿದ್ದುಪಡಿಯು ಶಾಸನ ಸಂಸ್ಥೆಗಳಿಗೆ ಒಂದು ಪಕ್ಷದಿಂದ ಚುನಾಯಿತರಾದ ಸದಸ್ಯರು ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವುದನ್ನು(ಪಕ್ಷಾಂತರ ನಿಷೇಧ ಕಾನೂನು) ನಿಷೇದಿಸಿತು.

➤ ಸಂವಿಧಾನ ( 56ನೇ ತಿದ್ದುಪಡಿ) ಮಸೂದೆ, 1987
ಈ ತಿದ್ದುಪಡಿಯು ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ಕಲ್ಪಿಸಿತು.

➤ ಸಂವಿಧಾನ ( 61 ನೇ ತಿದ್ದುಪಡಿ) ಮಸೂದೆ, 1989
61 ನೇ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುವ ಮತದಾರರ ಕನಿಷ್ಠ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿತು.

➤ ಸಂವಿಧಾನ ( 71 ನೇ ತಿದ್ದುಪಡಿ) ಮಸೂದೆ, 1991
ಈ ತಿದ್ದುಪಡಿಯು ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಲು ಅವಕಾಶ ಕಲ್ಪಿಸಿತು.

➤ ಸಂವಿಧಾನ ( 73 ನೇ ಮತ್ತು 74 ನೇತಿದ್ದುಪಡಿಗಳು) ಮಸೂದೆ 1992
ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸ್ವ -ಆಡಳಿತ ಪರಿಚಯಿಸಲಾಯಿತು. ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ದೊರೆಯುವಂತಾಯಿತು. ಪುರಸಭೆಗಳನ್ನು ಕುರಿತು ಹೊಸ ಸೇರ್ಪಡೆ ಮಾಡಲಾಯಿತು.

➤ ಸಂವಿಧಾನ ( 74ನೇ ತಿದ್ದುಪಡಿ) ಮಸೂದೆ, 1993
ಈ ಮಸೂದೆಯು ತ್ರಿಪುರ ಶಾಸನಸಭೆಯಲ್ಲಿ ಪರಿಶಿಷ್ಠ ಪಂಗಡಗಳಿಗೆ 20 ಸ್ಥಾನಗಳನ್ನು ಮೀಸಲಿರಿಸಲು ಅವಕಾಶ ನೀಡಿತು.

➤ ಸಂವಿಧಾನ ( 75 ನೆ ತಿದ್ದುಪಡಿ) ಮಸೂದೆ, 1994
ಇದು ರಾಜ್ಯಗಳ ಮಟ್ಟದಲ್ಲಿ ಬಾಡಿಗೆ ನಿಯಂತ್ರಣ ಪ್ರಾಧಿಕಾರಗಳನ್ನು ಸ್ಥಾಪಿಸಲು ಅವಕಾಶ ಮಾಡಿ ಕೊಟ್ಟಿತು.

➤ ಸಂವಿಧಾನ ( 76 ನೇ ತಿದ್ದುಪಡಿ) ಮಸೂದೆ, 1994
ಈ ತಿದ್ದುಪಡಿಯು ತಮಿಳುನಾಡು ಮೀಸಲಾತಿ ಕಾನೂನನ್ನು ಸಂವಿಧಾನದ 9 ನೇ ಪರಿಚ್ಛೇದದಲ್ಲಿ ಸೇರಿಸಿತು.

➤ ಸಂವಿಧಾನ ( 77 ನೇ ತಿದ್ದುಪಡಿ) ಮಸೂದೆ, 1994
ಈ ತಿದ್ದುಪಡಿಯು ರಾಜ್ಯಗಳ ಯಾವುದೇ ದರ್ಜೆ ಅಥವಾ ದರ್ಜೇಗಳ ಹುದ್ದೆಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ನೇಮಕಗೊಂಡಿಲ್ಲ ಎಂದು ರಾಜ್ಯಗಳಿಗೆ ಅನಿಸಿದ್ದಲ್ಲಿ, ಈ ಹುದ್ದೆಗಳಲ್ಲಿ ಸದರಿ ವರ್ಗಗಳಿಗೆ ಬಡ್ತಿ ನೀಡಲು ಅವಕಾಶ ಕಲ್ಪಿಸುವ ಸವಲತ್ತು ನೀಡಿತು.

➤ ಸಂವಿಧಾನ ( 78 ನೇ ತಿದ್ದುಪಡಿ) ಮಸೂದೆ, 1995
ಈ ತಿದ್ದುಪಡಿಯು ರಾಜ್ಯಗಳ ಕೆಲವು ನಿರ್ದಿಷ್ಟ ಭೂಸುಧಾರಣಾ ಕಾನೂನುಗಳನ್ನು ಸಂವಿಧಾನದ 9 ನೇ ಪರಿಚ್ಛೇದದಲ್ಲಿ ಸೇರಿಸಲು ಅವಕಾಶ ನೀಡಿತು.

➤ ಸಂವಿಧಾನ ( 79 ನೇ ತಿದ್ದುಪಡಿ) ಮಸೂದೆ, 1999
ಈ ತಿದ್ದುಪಡಿಯು ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಸರ್ಕಾರಿ ಸೆವೆಗಳಲ್ಲಿ ಮೀಸಲಾತಿಯನ್ನು ಹಾಗೂ ಲೋಕಸಭೆಗೆ ಇಬ್ಬರು ಆಂಗ್ಲೋ – ಇಂಡಿಯನ್ ಸದಸ್ಯರನ್ನು ನಾಮಕರಣ ಮಾಡುವುದನ್ನು 2010 ನೇ ವರ್ಷದವರೆಗೆ ವಿಸ್ತರಿಸುವ ಅವಕಾಶ ಕಲ್ಪಿಸಿತು.

➤ ಸಂವಿಧಾನ ( 86 ನೇ ತಿದ್ದುಪಡಿ) ಮಸೂದೆ, 2002
6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡುವ ಹೊಸ ವಿಧಿ ಸೇರ್ಪಡೆಯಾಯಿತು. ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಅನುವು ಮಾಡಿಕೊಡುತ್ತದೆ.

➤ ಸಂವಿಧಾನ ( 91 ನೆ ತಿದ್ದುಪಡಿ) ಮಸೂದೆ, 2003
ಈ ತಿದ್ದುಪಡಿಯು ಪಕ್ಷಾಂತರಿಯು ಇನ್ನುಳಿದ ಶಾಸನ ಸಭೆಯ ಅವಧಿಯವರೆಗೆ ಅಥವಾ ಮುಂದಿನ ಚುನಾವಣೆಯವರೆಗೆ ಯಾವುದೇ ಹುದ್ದೆ ಅಧಿಕಾರ ಹೊಂದದಂತೆ ಮಿತಿ ಹೇರಿದೆಯಲ್ಲದೆ ಮಂತ್ರಮಂಡಲದ ಗಾತ್ರವು ಶಾಸನ ಸಭೆಯ ಒಟ್ಟು ಸದಸ್ಯರ ಶೇಕಡಾ 15 ರಷ್ಟಿರಬೇಕೆಂದು ಸೂಚಿಸಿತು.

➤ ಸಂವಿಧಾನ ( 93 ನೇ ತಿದ್ದುಪಡಿ) ಮಸೂದೆ, 2006
ಸಂವಿದಾನದ ಈ ತಿದ್ದುಪಡಿಯು ಅನುದಾನರಹಿತ ಶಿಕ್ಷಣಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಮೀಸಲಾತಿಗೆ ಅವಕಾಸ ಕಲ್ಪಿಸಿತು.

➤ ಸಂವಿಧಾನ ( 101 ನೇ ತಿದ್ದುಪಡಿ) 2016
ಈ ತಿದ್ದುಪಡಿಯಿಂದ ಸರಕು ಸೇವಾ ತೆರಿಗೆ ( ಜಿಎಸ್‍ಟಿ) ಜಾರಿಗೆ ತರಲಾಗಿದೆ.

➤ ಸಂವಿಧಾನ ( 102 ನೇ ತಿದ್ದುಪಡಿ) ಮಸೂದೆ, 2018
ಈ ತಿದ್ದುಪಡಿಯು ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿ ಅದಕ್ಕೆ ಸಾಂವಿಧಾನಿಕ ಸ್ಥಾನಮಾನಗಳನ್ನು ನೀಡಬೇಕು ಎಂದು ಹೇಳಲಾಗಿದೆ.

➤ ಸಂವಿಧಾನ ( 103 ನೇ ತಿದ್ದುಪಡಿ) ಮಸೂದೆ, 2019
ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಶೀಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ 10 ರಷ್ಟು ಮೀಸಲಾತಿಯನ್ನು ಈ ತಿದ್ದುಪಡಿಗೆ ಮೂಲಕ ಒದಗಿಸಲಾಯಿತು.

➤ ಸಂವಿಧಾನ ( 104 ನೇ ತಿದ್ದುಪಡಿ) ಮಸೂದೆ 2020
ಈ ತಿದ್ದುಪಡಿಯು ಲೋಕಸಭೆಗೆ ಆಂಗ್ಲೋ ಇಂಡಿಯನ್ ಸ್ಥಾನಗಳನ್ನು ತೆಗೆದುಹಾಕಿ, ಪ್ರಸ್ತುತ ಲೋಕಸಭೆಯ ಸ್ಥಾನಗಳ ಸಂಖ್ಯೆ 545 ರಿಂದ 543 ಕ್ಕೆ ಇಳಿಸಿದೆ.

 

 

 

 

Comments

No comments yet. Why don’t you start the discussion?

Leave a Reply

Your email address will not be published. Required fields are marked *