ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ(Miss Universe 2021) ಪಟ್ಟ ಸಿಕ್ಕಿದೆ. ಪಂಜಾಬ್ ಮೂಲದ 21 ವರ್ಷದ ಸುಂದರಿ ಹರ್ನಾಜ್ ಸಂಧು((Harnaaz Kaur Sandhu) 70ನೇ ಮಿಸ್ ಯೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದಾರೆ. ಕೊನೆಯ ಬಾರಿ 2000ನೇ ಇಸವಿಯಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಅವರಿಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿತ್ತು.
# ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ನೇ ಇಸವಿಯಲ್ಲಿ ಲಾರಾ ದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೆನ್ ಪ್ರಶಸ್ತಿಯನ್ನು ಗೆದ್ದಿದ್ದರು. 70ನೇ ಮಿಸ್ ಯುನಿವರ್ಸ್ ಸ್ಪರ್ಧೆಯು ಇಸ್ರೇಲ್ನ ಇಲಾಟ್ನಲ್ಲಿ ಆಯೋಜನೆಯಾಗಿತ್ತು.
# ಇಸ್ರೇಲ್ನ ಈಲಿಯಟ್ನಲ್ಲಿ ನಡೆದ 70ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಅವರು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ವಿಜಯಶಾಲಿಯಾದರು. 2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಅವರಿಗೆ ಕಿರೀಟ ತೊಡಿಸಿದರು.
# ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದರು. ಪೋರ್ಟರಿಕೋ, ಅಮೆರಿಕ, ಬಹಾಮಸ್, ಪರಗ್ವೆ, ದಕ್ಷಿಣ ಆಫ್ರಿಕಾ, ಪಿಲಿಪ್ಪೀನ್ಸ್, ಫ್ರಾನ್ಸ್, ಕೊಲಂಬಿಯಾ ಮತ್ತು ಅರುಬಾದ ಸ್ಪರ್ಧಿಗಳು ಟಾಪ್ 10ಕ್ಕೆ ಆಯ್ಕೆಯಾಗಿದ್ದರು.
# ಹರ್ನಾಜ್ ಈಗ 70ನೇ ಭುವನ ಸುಂದರಿ 2021 ಮತ್ತು ಈ ಪ್ರಶಸ್ತಿಯನ್ನು ಗೆದ್ದ ಭಾರತದ ಮೂರನೇ ಸುಂದರಿ ಎನಿಸಿಕೊಂಡರು.
# 80 ಸ್ಪರ್ಧಿಗಳ ನಡುವೆ ಹರ್ನಾಜ್ ಅವರು ಟಾಪ್ 16ಕ್ಕೆ ಆಯ್ಕೆಯಾಗಿದ್ದರು. ಬಳಿಕ ಟಾಪ್ ಟೆನ್, ಟಾಪ್ ಫೈವ್ ಹಾಗೂ ಟಾಪ್ 3 ಹಂತಕ್ಕೆ ಆಯ್ಕೆಯಾಗಿದ್ದರು. ಅಂತಿಮವಾಗಿ ಭುವನ ಸುಂದರಿ ಪಟ್ಟ ಪಡೆದ ಮೂರನೇ ಭಾರತೀಯೆ ಎನಿಸಿಕೊಂಡರು.
# ಹರ್ನಾಜ್ ಸಂಧು ಹಿನ್ನೆಲೆ :
ರೂಪದರ್ಶಿ ಹಾಗೂ ನಟಿಯಾಗಿರುವ ಹರ್ನಾಜ್ ಅವರು 2021ರ ಅಕ್ಟೋಬರ್ನಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. 21 ವರ್ಷದ ಹರ್ನಾಜ್, ಪ್ರಸ್ತುತ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ 2017ರಲ್ಲಿ ಭಾಗವಹಿಸುವುದರೊಂದಿಗೆ ಅವರು ತಮ್ಮ ಸೌಂದರ್ಯ ಸ್ಪರ್ಧೆ ಪ್ರಯಾಣ ಆರಂಭಿಸಿದ್ದರು. ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಸೇರಿದಂತೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಅವರು ಕೆಲವು ಪಂಜಾಬಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಪಂಜಾಬ್ನ ಚಂಡೀಗಡದಲ್ಲಿನ ಸಿಖ್ ಕುಟುಂಬದಲ್ಲಿ 2000ದ ಮಾರ್ಚ್ 3ರಂದು ಜನಿಸಿದ ಅವರು, ಅಲ್ಲಿನ ಶಿವಾಲಿಕ್ ಪಬ್ಲಿಕ್ ಸ್ಕೂಲ್ ಮತ್ತು ಮಹಿಳೆಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾರೆ. 2017ರಲ್ಲಿ ಮಿಸ್ ಚಂಡೀಗಡ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾಗಳಲ್ಲಿ ಗೆದ್ದಿದ್ದರು. ಫೆಮಿನಾ ಮಿಸ್ ಪಂಜಾಬ್ 2019ರಲ್ಲಿ ಜಯ ಗಳಿಸುವ ಮೂಲಕ ಫೆಮಿನಾ ಮಿಸ್ ಇಂಡಿಯಾ ಸುತ್ತನ್ನು ಪೂರ್ಣಗೊಳಿಸಿದ್ದರು. ಇದರಲ್ಲಿ ಅವರು ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು.
# ಟಾಪ್ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸಬಹುದು ಎಂದು ನೀವು ಹೇಳುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಭಾರತದ ಹರ್ನಾಸ್ ಸಂಧು, “ಇಂದಿನ ಯುವಜನತೆ ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡಬೇಕಾಗಿರುವುದು. ನೀವು ವಿಶಿಷ್ಠರು ಎಂದು ಭಾವಿಸಿಕೊಂಡರೆ ನಿಮ್ಮ ಬದುಕು ಸುಂದರವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ಮನೆಯಿಂದ ಆಚೆಬನ್ನಿ, ನಿಮ್ಮ ಬಗ್ಗೆ ಯೋಚನೆ ಮಾಡಿ, ನಿಮ್ಮ ಜೀವನಕ್ಕೆ ನೀವೇ ನಾಯಕರು, ನಿಮಗೆ ನೀವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಇಂದು ಇಲ್ಲಿ ನಿಂತಿದ್ದೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.
# ಮಿಸ್ ಯೂನಿವರ್ಸ್ ಸ್ಪರ್ಧೆ ಬಗ್ಗೆ :
ಮಿಸ್ ಯೂನಿವರ್ಸ್ ಸ್ಪರ್ಧೆ 1952ರಲ್ಲಿ ಆರಂಭವಾಗಿತ್ತು. ಆದರೆ ಭಾರತಕ್ಕೆ ಮೊದಲ ಬಾರಿ ಭುವನ ಸುಂದರಿ ಕಿರೀಟ ಒಲಿದಿದ್ದು 42 ವರ್ಷಗಳ ಬಳಿಕ. 1994ರಲ್ಲಿ ನಟಿ ಸುಷ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. ಅವರ ಬಳಿಕ ಲಾರಾ ದತ್ತಾ ಕಿರೀಟ ಧರಿಸಿದ್ದರು.