ಭಾರತದ ಇತಿಹಾಸ – ಭಾಗ – 3 : ಆಧುನಿಕ ಭಾರತ

ಭಾರತದ ಇತಿಹಾಸ – ಭಾಗ – 3 : ಆಧುನಿಕ ಭಾರತ

ಆಧುನಿಕ ಭಾರತದ ಇತಿಹಾಸವನ್ನು 2 ಮುಖ್ಯ ಅವಧಿಯ ಭಾಗಗಳನ್ನಾಗಿ ವಿಂಗಡಿಸಬಹುದು. ಅವೆಂದರೆ,
1. ಬ್ರಿಟಿಷರ ಅವಧಿ
2. ಭಾರತೀಯ ಸ್ವಾತಂತ್ರ್ಯ ಚಳುವಳಿ ಮತ್ತು ಭಾರತದ ವಿಭಜನೆ
ಕ್ರಿ.ಶ 1498 ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮನು ಭಾರತಕ್ಕೆ ಜಲಮಾರ್ಗವನ್ನು ಶೋಧಿಸಿದಿದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿತು. ವಾಸ್ಕೋಡಗಾಮನು ಭಾರತಕ್ಕೆ ಜಲಮಾರ್ಗ ಶೋಧಿಸಿದಾಕ್ಷಣ ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಯಾದ್ಯಂತ ತಮ್ಮ ಪ್ರಾಬಲ್ಯವನ್ನು ಮೆರೆಯಲು ಪ್ರಾರಂಭಿಸಿದರು. ಪೋರ್ಚುಗೀಸರ ಕ್ಯಾಪ್ಟನ್ ಜನರಲ್ ಆಲ್ಫೋನ್ಸೊ ಡಿ ಆಲ್ಬುಕರ್ಕನು 1510 ರಲ್ಲಿ ಬಿಜಾಪುರದ ಸುಲ್ತಾನನಿಂದ ಬಿಜಾಪುರವನ್ನು ಗೆದ್ದುಕೊಂಡನು. ನಂತರ 1595 ರಲ್ಲಿ ಡಚ್ಚರು, 1600 ರಲ್ಲಿ ಇಂಗ್ಲೀಷರು ಹಾಗೂ 1664 ರಲ್ಲಿ ಫ್ರೆಂಚರು ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದರು. ಇಲ್ಲಿಯ ರಾಜಕೀಯ ಸ್ಥಿತಿಗತಿಗಳು ಅವರೆಲ್ಲಾ ಭಾರತದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರೇರಣೆ ನೀಡಿತು.

# 1. ಬ್ರಿಟಿಷರ ಅವಧಿ : 
ಈಸ್ಟ್ ಇಂಡಿಯಾ ಕಂಪನಿ – ಬ್ರಿಟಿಷ್ ವ್ಯಾಪಾರಿಗಳು 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ವ್ಯಾಪಾರದ ಉದ್ದೇಶದಿಂದ ಸ್ಥಾಪಿಸಿದರು. ಬ್ರಿಟಿಷರು ತಮ್ಮ ಮೊದಲ ಕಾರ್ಖಾನೆಯನ್ನು 1611 ರಲ್ಲಿ ಮಚಲಿ ಪಟ್ಟಣದಲ್ಲಿ ಸ್ತಾಪಿಸಿದರು. ಅವರು ಸೂರತ್‍ನಲ್ಲಿ ಕಾರ್ಖಾನೆಯನ್ನು ತೆರೆಯಲು ಜಹಾಂಗೀರನಿಂದ ಅನುಮತಿ ಪಡೆದರು. ನಂತರ ಅವರು ಆಗ್ರಾ, ಅಹ್ಮದಾಬಾದ್ ಮುಂತಾದೆಡೆ ಕಾರ್ಖಾನೆಗಳನ್ನು ಸ್ಥಾಪಿಸಿದರು. 1639 ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸನ್ನು ಖರೀದಿಸಿ ಸೈಂಟ್ ಜಾರ್ಜ್ ಕೋಟೆಯನ್ನು ನಿರ್ಮಿಸಿದರು. 1662 ರಲ್ಲಿ ಪೋರ್ಚುಗೀಸರು ಎರಡನೇ ಚಾಲ್ರ್ಸ್‍ಗೆ ಬಾಂಬೆ ದ್ವೀಪವನ್ನು ವರದಕ್ಷಿಣೆಯಾಗಿ ನೀಡಿದರು. ನಂತರ ಆ ದ್ವೀಪವು ಈಸ್ಟ್ ಇಂಡಿಯಾ ಕಂಪನಿಗೆ ಮಾರಾಟವಾಯಿತು.

ಇಂಗ್ಲೀಷರು ಪ್ರಾರಂಭದಲ್ಲಿ ಡಚ್ಚರು ಮತ್ತು ಫ್ರೆಂಚರ ವಿರೋಧವನ್ನು ಎದುರಿಸ ಬೇಕಾಯಿತಾದರೂ ಅವರೆನ್ನೆಲ್ಲಾ ಅವರು ಸುಲಬವಾಗಿ ನಿವಾರಿಸಿದರು. ಬ್ರಿಟಿಷರ ಗವರ್ನರ್ ಜನರಲ್ ಆಗಿದ್ದ ರಾಬರ್ಟ್‍ಕ್ಲೈವ್‍ನು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ತಳಹದಿ ಹಾಕಿದ ಪ್ರಮುಖನಾಗಿದ್ದಾನೆ. ಅವನ ನಾಯಕತ್ವದಲ್ಲಿ ಬ್ರಿಟಿಷ್ ಸೈನ್ಯವು ಆರ್ಕಾಟ್ ಮತ್ತು ಇನ್ನಿತರ ಭೂಭಾಗಗಳನ್ನು ವಶಪಡಿಸಿಕೊಂಡಿತು. ರಾಬರ್ಟ್‍ಕ್ಲೈವನು ಫ್ರೆಂಚರನ್ನು 1760 ರಲ್ಲಿ ನಡೆದ ವಾಂಡಿವಾಷ್ ಕದನದಲ್ಲಿ ಸೋಲಿಸಿದನು. ಇದರಿಂದಾಗಿ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸುವ ಫ್ರೆಂಚರ ಆಸೆ ನುಚ್ಚು ನೂರಾಯಿತು.

> ಈಸ್ಟ್ ಇಂಡಿಯಾ ಕಂಪನಿಯ ಅವಧಿಯ ಪ್ರಮುಖ ಗವರ್ನರ್ ಜನರಲ್‍ಗಳು:

➤ ರಾಬರ್ಟ್‍ಕ್ಲೈವ್:
ರಾಬರ್ಟ್‍ಕ್ಲೈವ್‍ನು ಈಸ್ಟ್ ಇಂಡಿಯಾ ಕಂಪನಿಯಿಂದ ಬಂಗಾಲದ ಮೊದಲ ಗವರ್ನರ್ ಆಗಿ ನೇಮಕಗೊಂಡನು. ಅವನು 1757ರಲ್ಲಿ ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್-ದೌಲ್‍ನನ್ನು ಸೋಲಿಸಿದನು. 1764 ರ ಬಕ್ಸಾರ್ ಕದನದಲ್ಲಿ ಬಂಗಾಳದ ನವಾಬ ಮೀರ್ ಕಾಸಿಂ ಹಾಗೂ ಔಧ್‍ನ ನವಾಬ ಎರಡನೆಯ ಶಾ ಆಲಂನ ಸೈನ್ಯಗಳನ್ನು ಸೋಲಿಸಿದನು. ಈ ವಿಜಯದಿಂದಾಗಿ ಬಂಗಾಳ, ಬಿಹಾರ ಮತ್ತು ಒರಿಸ್ಸಾದಲ್ಲಿ ದಿವಾನಿಯನ್ನು ಪಡೆಯುವ ಹಕ್ಕು ಈಸ್ಟ್ ಇಂಡಿಯಾ ಕಂಪನಿಗೆ ಸಿಕ್ಕಿತು.

➤ ವಾರನ್ ಹೇಸ್ಟಿಂಗ್ಸ್ ( 1774- 1785)
ರಾಬರ್ಟ್‍ಕ್ಲೈವ್‍ನ ನಂತರ ವಾರನ್ ಹೇಸ್ಟಿಂಗ್ಸ್‍ನು 1774ರಲ್ಲಿ ಭಾರತದ ಮೊದಲ ಗವರ್ನರ್ ಜನರಲ್ ಆಗಿ ನೇಮಕಗೊಂಡನು. ಅವನ ಅವಧಿಯಲ್ಲಿ 1784 ರಲ್ಲಿ ಪಿಟ್ಸ್ ಇಂಡಿಯಾ ಕಾಯಿದೆ ಜಾರಿಗೆ ಬಂದಿತು. ಇದರಿಂದಾಗಿ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರವು ಬ್ರಿಟಿಷ್ ಪಾರ್ಲಿಮೆಂಟ್‍ನ ಅಧೀನಕ್ಕೆ ಬಂತು. ಅವನು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನಲ್ಲದೆ, ಸಿವಿಲ್, ಕ್ರಿಮಿನಲ್ ಹಾಗೂ ಮನವಿ ನ್ಯಾಯಾಲಯಗಳನ್ನು ಸ್ಥಾಪಿಸಿದನು.

➤  ಲಾರ್ಡ್ ಕಾರ್ನವಾಲಿಸ್( 1786-1793)
1786 ರಲ್ಲಿ ಲಾರ್ಡ್ ಕಾರ್ನ್‍ವಾಲಿಸನು ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡನು. 1792ರಲ್ಲಿ ಅವನು ಮೂರನೆ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದನು. 1793 ರಲ್ಲಿ ಬಂಗಾಳದಲ್ಲಿ ಖಾಯಂ ಭೂ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದನು. ಇದು ಭೂ ಕಂದಾಯವನ್ನು ಸ್ಥಿರಗೊಳಿಸಿತಲ್ಲದೆ ವಿಧೇಯ ಜಮೀನುದಾರರನ್ನು ಸೃಷ್ಟಿಸಿತು. ಜಮೀನುದಾರರು ಜಮೀನನ ಸಂಪುರ್ಣ ಒಡೆಯರಾದರಲ್ಲದೆ, ರೈತರು ಜಮೀನ್ದಾರರ ಅವಲಂಬಿಗಳಾದರು.

➤ ಲಾರ್ಡ್ ವೆಲ್ಲೆಸ್ಲಿ ( 1798- 1805)
ಅವನು ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದನು. ಬ್ರಿಟಿಷ್ ಸೈನ್ಯವು ಅವನ ನಾಯಕತ್ವದಲ್ಲಿ ಟಿಪ್ಪುಸುಲ್ತಾನ ಮತ್ತು ಮರಾಠರನ್ನು ಸೋಲಿಸಿತು.

➤ ಲಾರ್ಡ್ ಮಿಂಟೋ(1807- 1813)
ಇವನು 1809 ರಲ್ಲಿ ಮಹಾರಾಜ ರಣಜಿತ್‍ಸಿಂಗನೊಡನೆ ಅಮೃತಸರ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಪ್ರಕಾರ ಸಟ್ಲೆಜ್ ನದಿಯು ಮಹಾರಾಜ ರಣಜಿತ್‍ಸಿಂಗ್ ಮತ್ತು ಬ್ರಿಟಿಷರ ನಡುವಿನ ಗಡಿಯಾಯಿತು.

➤ ಲಾರ್ಡ್ ಹೇಸ್ಟಿಂಗ್ಸ್ (1813- 1823)
ಇವನು ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದನು. 1817- 1819 ರಲ್ಲಿ ಪಿಂಡಾರಿಗಳನ್ನು ಅವನತಿಗೊಳಿಸಿದನು. ಆಂಗ್ಲ- ಮರಾಠ ಯುದ್ಧದಲ್ಲಿ ಮರಾಠರನ್ನು ಸಂಪೂರ್ಣವಾಘಿ ಸೋಲಿಸಿದನು. ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು. ಇವನ ಅವಧಿಯಲ್ಲಿ ಮದ್ರಾಸಿನ ಗವರ್ನ್‍ರ್ ಥಾಮಸ್ ಮನ್ರೊ ಮದ್ರಾಸ್ ಪ್ರಾಂತ್ಯದಲ್ಲಿ ರೈತವಾರಿ ಪದ್ಧತಿಯ ಭುಕಂದಾಯವನ್ನು ಜಾರಿಗೆ ತಂದನು. ಹೇಸ್ಟಿಂಗ್ಸ್ ರಸ್ತೆ, ನೀರಾವರಿ, ಸೇತುವೆ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಿದನು.

➤ ಲಾರ್ಡ್ ವಿಲಿಯಂ ಬೆಂಟಿಂಕ್91828-1835)
ಲಾರ್ಡ್ ವಿಲಿಯಂ ಬೆಂಟಿಂಕ್ ಅವನ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಸಾಮಾಜಿಕ ಸುಧಾರಣೆಗಳಿಗೆ ಹೆಸರುವಾಸಿಯಾಗಿದ್ದಾನೆ. ಅವನು 1829 ರಲ್ಲಿ ಸತಿ ಸಹಗಮನ ಪದ್ಧತಿಯನ್ನು ನಿಷೇದಿಸಿದನು. ಹಾಗೂ ಹೆಣ್ಣು ಶಿಶುಗಳ ಹತ್ಯೆಯನ್ನು ನಿಲ್ಲಿಸಿದನು. ಲಾರ್ಡ್ ಮೆಕಾಲೆಯ ಸಲಹೆಯಂv ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿ ಜಾರಿಗೆ ಬಂತು. ಈತನ ಅವಧಿಯಲ್ಲೇ 1833 ರಲ್ಲಿ ಚಾರ್ಟ್‍ರ್ ಕಾಯಿದೆಯಂತೆ ಈಸ್ಟ್ ಇಂಡಿಯಾ ಕಂಪನಿಯು ವಾಣಿಜ್ಯ ಕಂಪನಿಯಾಗುಳಿಯದೆ, ಆಡಳಿತಾತ್ಮಕ ಅಧಿಕಾರದ ವ್ಯವಸ್ಥೆಯೆನಿಸಿತು.

➤ ಲಾರ್ಡ್ ಡಾಲ್ ಹೌಸಿ(1848- 1856)
ಇವನು 1848- 1859 ರಲ್ಲಿ ಎರಡನೇ ಸಿಖ್ – ಆಂಗ್ಲ ಯುದ್ಧದಲ್ಲಿ ಸಿಖ್ಖರನ್ನು ಸೋಲಿಸಿ ಪಂಜಾಬನ್ನು ವಶಪಡಿಸಿಕೊಂಡನು. ದತ್ತು ಮಕ್ಕಳಿಗೆ ಸಿಂಹಾಸನದ ಹಕ್ಕಿಲ್ಲವೆಂಬ ನೀತಿಯನ್ನು ಜಾರಿಗೊಳಿಸಿದನು. ಅವನು ಝಾನ್ಸಿ, ಜೌದ್, ಸತಾರ ಮುಂತಾದ ಪ್ರಾಂತ್ಯಗಳನ್ನು ಈ ನೀತಿಯಂತೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. 1856 ರಲ್ಲಿ ವಿಧವಾ ಪುನರ್‍ವಿವಾಹ ಕಾಯಿದೆಯನ್ನು ಜಾರಿಗೆ ತಂದನು.
ಡಾಲ್‍ಹೌಸಿಯ ನಂತರ 1856 ರಲ್ಲಿ ಬಂದ ಲಾರ್ಡ್ ಕ್ಯಾನಿಂಗನು 1857 ರಲ್ಲಿ ಮದ್ರಾಸ್, ಕಲ್ಕತ್ತಾ ವಿಶ್ವವಿದ್ಯಾನಿಲಯಗಳನ್ನು ಸ್ತಾಪಿಸಿದನು. ಇವನ ಕಾಲದಲ್ಲೇ 1857 ರಲ್ಲಿ ಸಿಪಾಯಿ ದಂಗೆ ನಡೆಯಿತು. ಲಾರ್ಡ್ ಕ್ಯಾನಿಂಗನು 1858 ರಲ್ಲಿ ಭಾರತದ ವೈಸರಾಯ್ ಆಗಿ ನೇಮಕಗೊಂಡನು.

#  ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857)
ಇದನ್ನು ಸಿಪಾಯಿ ದಂಗೆ ಎಂದೂ ಸಹ ಕರೆಯಲಾಗುತ್ತದೆ. ಮಾರ್ಚ್ 29, 1857 ರಲ್ಲಿ 34 ನೇ ರಿಜಿಮೆಂಟ್‍ನ ಭಾರತೀಯ ಸಿಪಾಯಿ ಮಂಗಲ್ ಪಾಂಡೆಯು ಬರಕ್‍ಪುರ್‍ನ ಕವಾಯಿತು ಮೈದಾನದಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದನು. ಅಲ್ಲಿ ಹಾಜರಿದ್ದ ಭಾರತೀಯ ಸಿಪಾಯಿಗಳು ಮಂಗಲ್‍ಪಾಂಡೆಯನ್ನು ಬಂದಿಸಲು ನಿರಾಕರಿಸಿದರು. ನಂತರ ಮಂಗಲ ಪಾಂಡೆಯನ್ನು ಬಂಧಿಸಿ, ವಿಚಾರಣೆಗೊಳಿಸಿ, ನೇಣಿಗೇರಿಸಲಾಯಿತು. ಇದು ಎಲ್ಲೆಡೆ ಸುದ್ದಿಯಾಗಿ ಲಕ್ನೋ, ಅಂಬಾಲ, ಮೀರತ್ ಮುಂತಾದೆಡೆ ಸಿಪಾಯಿಗಳು ಸಿಡಿದೇಳಲು ಕಾರಣವಾಯಿತು.

ಮೇ 10, 1857 ರಲ್ಲಿ ಮಿರತ್‍ನಲ್ಲಿ ಸೈನಿಕರು ದನದ ಕೊಬ್ಬನ್ನು ಸವರಲಾಗಿದೆ ಎನ್ನಲಾದ ಹೊಸ ಬಂದೂಕುಗಳನ್ನು ಮಟ್ಟಲು ನಿರಾಕರಿಸಿದರು. ಸೈನಿಕರು ಇತರ ಜನರೊಡನೆ ಸಿಟ್ಟಿಗೆದ್ದು ಜೈಲುಗಳನ್ನು ಮುರಿದು, ಇತರೆ ಆಸ್ತಿಪಾಸ್ತಿಗೆ ಹಾನಿ ಮಾಡಿ, ಕೆಲವು ಬ್ರಿಟಿಷರನ್ನು ಸಾಯಿಸಿ ದೆಹಲಿಯತ್ತ ಹೊರಟರು. ದೆಹಲಿಯಲ್ಲಿಯ ಸೈನಿಕರು ಸಹ ಮೀರತ್‍ನಿಂದ ಬಂದ ಸೈನಿಕರೊಡನೆ ಸೇರಿದರು. ಅವರೆಲ್ಲಾ ದೆಹಲಿಯನ್ನು ವಶಪಡಿಸಿಕೊಂಡು 80 ವರ್ಷ ವಯಸ್ಸಿನ ಬಹದ್ದೂರ್ ಶಾಹ್ ಜಾಫರ್‍ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು. ಆದರೆ ದಂಗೆಯೆದ್ದ ಸೈನಿಕರಿಗಿಂತ ಪ್ರಬಲರಾಗಿದ್ದ ಬ್ರಿಟಿಷರು ಸೆಪ್ಟೆಂಬರ್ 20, 1857 ರಲ್ಲಿ ದೆಹಲಿಯನ್ನು ಪುನ: ವಶಪಡಿಸಿಕೊಂಡು ಚಕ್ರವರ್ತಿ ಬಹದ್ದೂರ್ ಶಾಹ್‍ನನ್ನು ಬಂಧಿಸಿದರು.

# 1857 ರ ನಂತರ ಬ್ರಿಟಿಷರ ಆಡಳಿತ : 
• ಭಾರತ ಸರ್ಕಾರಿ ಕಾಯಿದೆ 1858
ನವೆಂಬರ್ 1858 ರಲ್ಲಿ ವಿಕ್ಟೋರಿಯಾ ರಾಣಿಯು ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್, 1858 ರ ಅನ್ವಯ ಭಾರತದ ಆಡಳಿತವು ನೇರವಾಗಿ ಬ್ರಿಟನ್ ರಾಣಿಯ ಅಧೀನದಲ್ಲಿರುತ್ತದೆ ಎಂದು ಘೋಷಿಸಿದಳು. ಇದರಿಂದಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ಭಾರತದ ಆಡಳಿತವು ಬ್ರಿಟಿಷ್ ರಾಣಿಗೆ ವರ್ಗಾಯಿಸಲ್ಪಟ್ಟಿತು. ಅಲ್ಲದೆ ವೈಸ್‍ರಾಯ್‍ಗಳು ನೇಮಕಗೊಂಡರು.

➤ ಭಾರತ ರಾಷ್ಟ್ರೀಯ ಕಾಂಗ್ರೆಸ್ : 
1885 ರಲ್ಲಿ ಎ.ಓ.ಹ್ಯೂಂ ಎಂಬ ನಿವೃತ್ತ ಬ್ರಿಟಿಷ್ ಅಧಿಕಾರಿ ಹಲವಾರು ಭಾರತೀಯ ನಾಯಕರ ಸಹಕಾರದಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧಿವೇಶನ ಮುಂಬಯಿಯಲ್ಲಿ 1885 ರಲ್ಲಿ ಡಬ್ಯೂ. ಸಿ. ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ವರ್ಷದ ಡಿಸೆಂಬರ್‍ನಲ್ಲಿ ಕಾಂಗ್ರೆಸ್ ತನ್ನ ವಾರ್ಷಿಕ ಅಧಿವೇಶನವನ್ನು ನಡೆಸುತ್ತಾ ಬಂತು. ಕಾಂಗ್ರೆಸ್‍ನ ಸ್ತಾಪನೆಯಿಂದ ಭಾರತದ ಸ್ವಾತಂತ್ರ್ಯ ಚಳುವಳಿಗೆ ಸಾಂಸ್ಥಿಕ ಸ್ವರೂಪ ಸಿಕ್ಕಂತಾಯಿತು.

➤  ಬಂಗಾಳದ ವಿಭಜನೆ : 
1905 ರಲ್ಲಿ ವೈಸ್‍ರಾಯ್ ಆಗಿದ್ದ ಲಾರ್ಡ್ ಕರ್ಜನ್ ಬಂಗಾಳವನ್ನು ಎರಡು ಪ್ರಾಂತ್ಯಗಳಾಗಿ ಇಬ್ಬಾಗ ಮಾಡಿದನು. ಒಡೆದು ಆಳುವುದು ಅವನ ಉದ್ದೇಶವಾಗಿತ್ತು. ಬಂಗಾಳದ ಹಾಗೂ ಇನ್ನಿತರ ಜನರು ಇದನ್ನು ತೀವ್ರವಾಗಿ ವಿರೋಧಿಸಿದರು. ಇದು ಸ್ವದೇಶಿ ಚಳುವಳಿಗೆ ಕಾರಣವಾಯಿತು. ಆನರ ತೀವ್ರ ಪ್ರತಿಭಟನೆಯ ಕಾರಣದಿಂದ ಬಂಗಾಳದ ವಿಭಜನೆಯನ್ನು 1911ರಲ್ಲಿ ಹಿಂತೆಗೆದುಕೊಳ್ಳಲಾಯಿತು.

➤  ಮುಸ್ಲಿಂಲೀಗ್ : 
1906 ರಲ್ಲಿ ಡಾಕಾದ ನವಾಬ್ ಸಲೀಮುಲ್ಲಾರು ಮುಸ್ಲಿಂರಿಗಾಗಿಯೇ ಪ್ರತ್ಯೇಕ ರಾಜಕೀಯ ಪಕ್ಷ ಭಾರತೀಯ ಮುಸ್ಲಿಂಲೀಗನ್ನು ಸ್ಥಾಪಿಸಿದರು. ಮುಸ್ಲಿಂಲೀಗ್ ಬಂಗಾಳದ ವಿಭಜನೆಗೆ ಬೆಂಬಲ ನೀಡಿತಲ್ಲದೆ ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸುವುದನ್ನು ವಿರೋಧಿಸಿತು. ಹಲವಾರು ವಿಷಯಗಳಲ್ಲಿ ಅದು ಕಾಂಗ್ರೇಸ್‍ನೊಂದಿಗೆ ಭಿನ್ನಾಭಿಪ್ರಾಯ ಹೊಂದಿತ್ತು.

➤ ಸ್ವದೇಶಿ ಚಳುವಳಿ : 
ಆಗಸ್ಟ್ 7, 1906 ರಲ್ಲಿ ಭಾರತೀಯ ಕಾಂಗ್ರೆಸ್ ಬ್ರಿಟಿಷರ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿತು. ಹಾಗಾಗಿ ದೇಶದ ನಾನಾ ಭಾಗದ ಪ್ರಮುಖ ನಗರಗಳಲ್ಲಿ ಬ್ರಿಟಿಷ್ ವಸ್ತುಗಳ ಸಾಮೂಹಿಕ ದಹನ ನಡೆಸಲಾಯಿತು.

➤ ಸೂರತ್‍ನಲ್ಲಿ ಕಾಂಗ್ರೆಸ್ ವಿಭಜನೆ(1907) : 
1907 ರಲ್ಲಿ ಸೂರತ್‍ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಉದಾರವಾದಿ ಹಾಗೂ ಉಗ್ರವಾದಿ ಕಾಂಗ್ರೆಸ್ ಮುಖಂಡರಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತೀವ್ರ ಭಿನ್ನಭಿಪ್ರಾಯ ಉಂಟಾಗಿ ಕಾಂಗ್ರೆಸ್ ಎರಡು ಗುಂಪಾಗಿ ವಿಭಜನೆಗೊಂಡಿತು. ಉಗ್ರವಾದಿಗಳು ಕಾಂಗ್ರೆಸ್‍ನಿಂದ ಹೊರ ಬಂದರು. 1916 ರಲ್ಲಿ ಲಕ್ನೋದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅವರೆಲ್ಲಾ ಪುನ: ಒಂದಾದರು.

➤ ಮಿಂಟೋ- ಮಾರ್ಲೆ ಸುಧಾರಣೆ (1909)
ಲಾರ್ಡ್ ಮಿಂಟೊ ಭಾರತದ ವೈಸ್‍ರಾಯ್ ಆಗಿದ್ದಾಗ ಮಿಂಟೋ- ಮಾರ್ಲೆ ಸುಧಾರಣೆಗಳನ್ನು ಜಾರಿಗೆ ತಂದು ಮುಸ್ಲಿಮರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ ನೀಡುವ ಬಗ್ಗೆ ಯೋಚಿಸಿದನು. ಇದರಿಂದ ಹಿಂದು- ಮುಸ್ಲಿಂರ ಮಧ್ಯೆ ಘರ್ಷಣೆಯನ್ನುಂಟು ಮಾಡಿ ಸುಲಭ ಆಡಳಿತ ನಡೆಸುವುದು ಬ್ರಿಟಿಷ್ ಸರ್ಕಾರದ ಉದ್ದೇಶವಾಗಿತ್ತು.

➤ ಲಕ್ನೋ ಒಪ್ಪಂದ( 1916) :
ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್‍ಗಳು 1916 ರಲ್ಲಿ ಲಕ್ನೋ ಅಧಿವೇಶನವನ್ನು ನಡೆಸಿದವು. ಈ ಅಧಿವೇಶನದಲ್ಲಿ ಮುಸ್ಲಿಂರ ಮನಸ್ಸಿನಲ್ಲಿ ಬ್ರಿಟಿಷ್ ವಿರೋಧಿ ಭಾವನೆಗಳನ್ನು ತುಂಬಲಾಯಿತು. ಈ ಅಧಿವೇಶನವು ಹಿಂದೂ- ಮುಸ್ಲಿಂ ಐಕ್ಯತೆಯನ್ನು ನಿರ್ಮಿಸಲು ಪ್ರಮುಖ ಪಾತ್ರವಹಿಸಿತು.

➤ ಹೋಂ ರೂಲ್ ಚಳುವಳಿ( 1916) : 
1916 ರಲ್ಲಿ ಅನಿಬೆಸೆಂಟರು ಬಾಲಗಂಗಾಧರ ತಿಲಕ್ ಮತ್ತು ಇನ್ನಿತರ ನಾಯಕರ ಬೆಂಬಲದೊಂದಿಗೆ ಹೋಂ ರೂಲ್ ಚಳುವಳಿಯನ್ನು ಆರಂಭಿಸಿದರು. ಈ ಚಳುವಳಿಯ ಉದ್ದೇಶ ಸಂವಿಧಾನಿಕವಾಗಿ ಸ್ವಸರ್ಕಾರವನ್ನು ರಚಿಸಿ ಆಡಳಿತ ನಡೆಸುವುದಾಗಿತ್ತು.

➤  ಗಾಂಧಿಯುಗ : 
ಅಕ್ಟೋಬರ್ 2, 1869 ರಲ್ಲಿ ಗುಜರಾತ್‍ನ ಪೋರಬಂದರಿನಲ್ಲಿ ಜನಿಸಿದ ಮಹಾತ್ಮಾಗಾಂಧಿಯವರು, ಇಂಗ್ಲೆಂಡ್‍ನಲ್ಲಿ ಕಾನೂನು ಶಿಕ್ಷಣ ಪಡೆದು 1893ರಲ್ಲಿ ವಕೀಲಿ ವೃತ್ತಿ ಕೈಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಜೀವಿಸುತ್ತಿರುವ ಪರಿಸ್ಥಿತಿ ಹಾಗೂ ಅಲ್ಲಿನ ಬಿಳಿಯರಿಂದಾಗುತ್ತಿದ್ದ ಅಪಮಾನಗಳು ಗಾಂಧಿಯವರು ದಕ್ಷಿಣ ಆಫ್ರಿಕಾ ಸರ್ಕಾರದ ವಿರುದ್ಧ ಹೋರಾಟ ಮಾಡಿದರು. ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಕಂಡು ಹಿಡಿದ ಅಸ್ತ್ರವೇ ಸತ್ಯ ಹಾಗೂ ಅಹಿಂಸೆಯ ತಳಹದಿಯ ಸತ್ಯಾಗ್ರಹ. ಅವರು ತಮ್ಮ 46 ನೇ ವಯಸ್ಸಿನಲ್ಲಿ 1915 ರಲ್ಲಿ ಭಾರತಕ್ಕೆ ವಾಪಸಾದರು. 1916 ರಲ್ಲಿ ಗುಜರಾತಿನ ಅಹಮದಾಬಾದಿನಲ್ಲಿ ಸಬರಮತಿ ಆಶ್ರಮವನ್ನು ಸ್ಥಾಪಿಸಿದರು. ಅವರು ಬಿಹಾರದ ಚಂಪಾರಣ್‍ನಲ್ಲಿ 1917 ರಲ್ಲಿ ತಮ್ಮ ಮೊದಲ ಸತ್ಯಾಗ್ರಹವನ್ನು ನಡೆಸಿದರು. ಅಲ್ಲಿಂದ 1947 ರವರೆಗೆ ಗಾಂಧೀಜಿವರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದರು.ಸತ್ಯಾಗ್ರಹ ಪ್ರಬಲ ಅಸ್ತ್ರವಾಯಿತು.

➤ ರೌಲತ್ ಕಾಯಿದೆ (1919) :
ಲಾರ್ಡ್ ಚೆಮ್ಸ್‍ಪೋರ್ಡ್ ಭಾರತದ ವೈಸರಾಯ್ ಆಗಿದ್ದಾಗ ರೌಲತ್ ಕಾಯಿದೆ ಜಾರಿಗೆ ಬಂತು. ಈ ಕಾಯಿದೆಯು ಸರ್ಕಾರಕ್ಕೆ ಯಾವುದೇ ಸಂಶಯ ಬಂದ ವ್ಯಕ್ತಿಯನ್ನು ವಿಚಾರಣೆ ಇಲ್ಲದೆ ಬಂಧಿಸಿ ಸೆರೆಗೆ ಹಾಕುವ ಅಧಿಕಾರ ನೀಡಿತು. ಗಾಂಧಿಯವರು ಇದನ್ನು ವಿರೋಧಿಸಿ ಸತ್ಯಾಗ್ರಹಕ್ಕೆ ಕರೆ ನೀಡಿದರು.

➤ ಜಲಿಯನ್‍ವಾಲಾಬಾಗ್ ಹತ್ಯಾಕಾಂಡ : 
ರೌಲತ್ ಕಾಯಿದೆಯನ್ವಯ ಡಾ. ಸೈಪುದ್ದೀನ್ ಕಿತ್‍ಚ್ಲು ಮತ್ತು ಸತ್ಯಪಾಲರನ್ನು ಬ್ರಿಟಿಷರು ಏಪ್ರಿಲ್10, 1919ರಲ್ಲಿ ಬಂಧಿಸಿದರು. ಇದು ಪಂಜಾಬ್‍ನಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಏಪ್ರಿಲ್ 13, 1919 ರಂದು ಜಲಿಯನ್‍ವಾಲಾಭಾಗ್‍ನಲ್ಲಿ ನಾಯಕರ ಬಂಧನವನ್ನು ವಿರೋಧಿಸಿ ಸಾರ್ವಜನಿಕ ಸಭೆಯೊಂದು ನಡೆಯಿತು. ಇದರಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು. ಸಭೆ ಪ್ರಾರಂಭವಾಗುವ ಮುನ್ನ ಪಂಜಾಬ್ ಪ್ರಾಂತ್ಯದ ಲೆಪ್ಟಿನೆಂಟ್ ಗವರ್ನರ್ ಡೈಯರ್ ಯಾವುದೇ ಪೂರ್ವ ಸೂಚನೆ ಇಲ್ಲದೆ ಜನರತ್ತ ಗುಂಡು ಹಾರಿಸಲು ಆದೇಶಿದನು. ಈ ಹತ್ಯಾಕಾಂಡದಲ್ಲಿ ಸಾವಿರಾರು ಜನರು ಸಾವು ನೋವಿಗೆ ಈಡಾದರು. ಇದು ಬ್ರಿಟಿಷರ ವಿರುದ್ಧ ಭಾರತೀಯರಲ್ಲಿ ಇನ್ನಷ್ಟು ಕಿಚ್ಚು ಮೂಡಿಸಲು ಕಾರಣವಾಯಿತು.

➤  ಖಿಲಾಫತ್ ಚಳುವಳಿ ( 1920) : 
ಮೊದಲ ಮಹಾಯುದ್ಧದಲ್ಲಿ ಸೋತ ಟರ್ಕಿಯ ಸುಲ್ತಾನನ ಎಲ್ಲಾ ಅಧಿಕಾರಗಳನ್ನು ಬ್ರಿಟಿಷರು ಕಿತ್ತುಕೊಂಡರು. ಈ ಸುಲ್ತಾನನನ್ನು ಭಾರತೀಯ ಮುಸ್ಲಿಂರು ತಮ್ಮ ಧಾರ್ಮಿಕ ಗುರುವೆಂದು ಪರಿಗಣಿಸುತ್ತಿದ್ದರು. ಸುಲ್ತಾನನಿಗಾದ ಅವಮಾನ ಇಲ್ಲಿಯ ಮುಸ್ಲಿಮರನ್ನು ಕೆರಳಿಸಿತು. ಮಹಮದ್ ಆಲಿ ಹಾಗೂ ಸೌತ್ ಆಲಿ ಎಂಬ ಸಹೋದರರು ಮತ್ತು ಮೌಲಾನ ಅಬ್ದುಲ್ ಕಲಂ ಆಜಾದರು ಖಿಲಾಫತ್ ಚಳುವಳಿಯನ್ನು ನಡೆಸಿದರು. ಈ ಚಳುವಳಿಗೆ ಗಾಂದೀಜಿ ಮತ್ತು ಕಾಂಗ್ರೆಸ್ ಬೆಮಬಲ ನೀಡಿತು. ಇದು ಹಿಂದೂ- ಮುಸ್ಲಿಂ ಐಕ್ಯತೆಗೆ ಪುಷ್ಟಿ ನೀಡಿತು.

➤ ಅಸಹಕಾರ ಚಳುವಳಿ- (1920- 1922) : 
ಡಿಸೆಂಬರ್ 1920 ರ ನಾಗಪುರ ಅಧಿವೇಶನದಲ್ಲಿ ಕಾಂಗ್ರೆಸ್ ಗಾಂಧೀಜಿಯವರ ಅಸಹಕಾರ ಚಳುವಳಿಯ ಕಾರ್ಯಕ್ರಮಕ್ಕೆ ಸಮ್ಮತಿ ಸೂಚಿಸಿತು. ಈ ಚಳುವಳಿಯ ಪ್ರಕಾರ ಗಾಂಧೀಜಿಯವರು ಸರ್ಕಾರಿ ಕೆಲಸ, ಶಾಲೆ, ಕಾಲೇಜು, ನ್ಯಾಯಾಲಯ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದರು. ಈ ಚಳುವಳಿಯು ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಚೌರಿಚೌರಾದಲ್ಲಿ 22 ಪೋಲಿಸರನ್ನು ಹತ್ಯೆಗೈದು ಚಳುವಳಿಯು ಹಿಂಸಾರೂಪವನ್ನು ತಾಳಿದ್ದರಿಂದ 1922 ರಲ್ಲಿ ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಲು ಕರೆ ಕೊಟ್ಟರು.

➤ ಸ್ವರಾಜ್ ಪಕ್ಷ : 
ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ಹಿಂದೆ ಪಡೆದದ್ದು ಹಲವರಲ್ಲಿ ಬೇಸರ ಮೂಡಿಸಿತು. ಮೋತಿಲಾಲ ನೆಹರು, ಎನ್. ಸಿ .ಕೇಲ್ಕರ್ ಮತ್ತು ಸಿ. ಆರ್. ದಾಸ್‍ರಂತಹ ನಾಯಕರು ಸೇರಿ ಸ್ವರಾಜ್ ಪಕ್ಷವನ್ನು 1922 ರಲ್ಲಿ ಸ್ತಾಪಿಸಿದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಲೆಜಿಸ್ಲೇಟಿವ್ ಕೌನ್ಸಿಲ್ ಪ್ರವೇಶಿಸುವ ಅನಿವಾರ್ಯತೆ ಬಗ್ಗೆ ಒತ್ತು ನೀಡಿದರು.

➤ ಸೈಮನ್ ಕಮಿಷನ್ -1927 ; 
ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಯಾವ ಮಟ್ಟದಲ್ಲಿ ಸ್ಥಾಪಿಸಬಹುದು ಎಂದು ಅಧ್ಯಯನ ಮಾಡಿ, ವರದಿ ನೀಡಲು ಸೈಮನ್ ಕಮಿಷನ್ ಅನ್ನು ನವೆಂಬರ್ 1927 ರಲ್ಲಿ ನೇಮಕ ಮಾಡಿತು. ಈ ಆಯೋಗದ ಎಲ್ಲಾ ಸದಸ್ಯರು ಯುರೋಪಿಯನ್ನರಾಗಿದ್ದುದು ಭಾರತೀಯರನ್ನು ಕೆರಳಸಿ, ಆ ಆಯೋಗವನ್ನೇ ಬಹಿಷ್ಕರಿಸಲು ತಿರ್ಮಾನಿಸಿದರು. 1928 ರಲ್ಲಿ ಭಾರತಕ್ಕೆ ಬಂದ ಸೈಮನ್ ಕಮೀಷನ್ ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು. ಲಾಹೋರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲಿಸರ ಲಾಠಿ ಏಟಿನಲ್ಲಿ ತೀವ್ರ ಗಾಯಗೊಂಡಿದ್ದ ಲಾಲ ಲಜಪತರಾಯರು ಕೆಲವೇ ದಿನಗಳಲ್ಲಿ ಅಸುನೀಗಿದರು.

➤ ದಂಡಿ ಚಳುವಳಿ ( ಕಾನೂನು ಭಂಗ ಚಳುವಳಿ) : 
ಮಾರ್ಚ್ 1930 ರಲ್ಲಿ ಗಾಂಧೀಜಿಯವರು ಬ್ರಿಟಿಷರ ಉಪ್ಪಿನ ಕಾಯಿದೆಯನ್ನು ಮುರಿಯಲು ಸಬರಮತಿ ಆಶ್ರಮದಿಂದ ದಂಡಿ ಎಂಬ ಸಣ್ಣ ಹಳ್ಳಿಗೆ ಪಾದಯಾತ್ರೆ ಆರಂಭಿಸಿದರು. ಈ ಚಳುವಳಿಯು ದೇಶಾದ್ಯಂತ ನಡೆಯಿತು. ಇದರಿಂದ ಕೆರಳಿದ ಬ್ರಿಟಿಷರು ಕಾಂಗ್ರೆಸ್‍ನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸದರಲ್ಲದೆ, ಮೇ 5, 1930 ರಂದು ಗಾಂಧೀಜಿಯವರನ್ನು ಬಂಧಿಸಿದರು.

➤  ಗಾಂಧೀ- ಇರ್ವಿನ್ ಒಪ್ಪಂದ – 1931 : 
1931 ರಲ್ಲಿ ಗಾಂಧಿ ಮತ್ತು ಇರ್ವಿನ್ ನಡುವೆ ಒಪ್ಪಂದವಾಗಿ, ಲಾರ್ಡ್ ಇರ್ವಿನ್‍ನು ಬಂಧಿಸಿದ ಎಲ್ಲಾ ನಾಯಕರ ಬಿಡುಗಡೆಗೆ ಒಪ್ಪದನಲ್ಲದೆ ಉಪ್ಪಿನ ಕಾಯಿದೆಯನ್ನು ಬದಲಾಯಿಸಿ, ವಿಶೇಷ ಸುಗ್ರೀವಾಜ್ಞೆಯನ್ನು ವಾಪಸು ಪಡೆದನು. ಇದರಿಂದ ಕಾಂಗ್ರೆಸ್ ಕಾನೂನು ಭಂಗ ಚಳುವಳಿಯನ್ನು ವಾಪಸು ಪಡೆಯಿತು.

➤  ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ – 1935 : 
1935 ರಲ್ಲಿ ಸೈಮನ್ ಕಮಿಷನ್ ವರದಿಯ ಮೇರೆಗೆ ಬ್ರಿಟಿಷ್ ಸರ್ಕಾರವು ಗವರ್ನ್‍ಮೆಂಟ್ ಆಫ್ ಇಂಡಿಯಾ ಆಕ್ಟ್‍ನ್ನು ಅಂಗೀಕರಿಸಿತು. ಈ ಕಾಯಿದೆಯು ಭಾರತದಲ್ಲಿ ಫೆಡರಲ್ ರೀತಿಯ ಸರ್ಕಾರ ರಚಿಸಲು ಒತ್ತು ನೀಡಿತು.

➤  ಕ್ವಿಟ್ ಇಂಡಿಯಾ ಚಳುವಳಿ – 1942 : 
ಆಗಸ್ಟ್ 1942 ರಲ್ಲಿ ಕಾಂಗ್ರೆಸ್ ವಾರ್ಧಾದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಸಲು ತಿರ್ಮಾನಿಸಿತು. ಗಾಂಧೀಜಿಯವರು ಸ್ವಾತಂತ್ರ್ಯವನ್ನು ಗಳಿಸಲು “ ಮಾಡು ಇಲ್ಲವೇ ಮಡಿ ಎಂದು ದೇಶಧ ಜನತೆಗೆ ಕರೆ ನೀಡಿದರು. ಅವರು ಬ್ರಿಟಿಷರಿಗೆ ಭಾರತವನ್ನು ಬಿಟ್ಟು ತೊಲಗುವಂತೆ ಕೇಳಿಕೊಂಡರು.

➤ ಕ್ಯಾಬಿನೆಟ್ ಮಿಷನ್ – 1946 : 
ಭಾರತದಲ್ಲಿ ಸಂವಿಧಾನಕ್ಕೆ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಶಿಫಾರಸು ಮಾಡಲು ಕ್ಯಾಬಿನೆಟ್ ಮಿಷನ್ 1946 ರಲ್ಲಿ ಭಾರತಕ್ಕೆ ಭೇಟಿ ನೀಡಿ ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿ ಮಾಡಿತು. ಇದರ ಶಿಫಾರಸ್ಸಿನಂತೆ ಸಂವಿಧಾನ ರಚನಾ ಸಭೆಯನ್ನು 1946 ರಲ್ಲಿ ಡಾ.ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಮುಸ್ಲಿಂಲೀಗ್ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲಿಲ್ಲ. ಕಾಂಗ್ರೆಸ್ ಜವಾಹರಲಾಲ್ ನೆಹರು ನಾಯಕತ್ವದಲ್ಲಿ ಸೆಪ್ಟೆಂಬರ್ 1946 ರಲ್ಲಿ ಹಂಗಾಮಿ ಸರ್ಕಾರವನ್ನು ರಚಿಸಿತು. ಮೊದಲಿಗೆ ಮುಸ್ಲಿಂಲೀಗ್ ಸರ್ಕಾರದಲ್ಲಿ ಭಾಗವಹಿಸಲಿಲ್ಲವಾದರೂ ನಂತರ ತೀವ್ರ ಒತ್ತಾಯದ ಮೇರೆಗೆ ಅಕ್ಟೋಬರ್‍ನಲ್ಲಿ ಭಾಗವಹಿಸಿತು.

➤  ಮೌಂಟ್‍ಬ್ಯಾಟನ್ ಯೋಜನೆ : 
ಮುಸ್ಲಿಂಲೀಗ್ ಸಂವಿಧಾನ ರಚನಾ ಸಭೆಯನ್ನು ಸೇರಲು ನಿರಾಕರಿಸಿದ್ದರಿಂದ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಜೂನ್ 3, 1947 ರಲ್ಲಿ ಲಾರ್ಡ್ ಮೌಂಟ್‍ಬ್ಯಾಟನ್‍ನ್ನರು ತಮ್ಮ ಯೋಜನೆಯನ್ನು ಕಾಂಗ್ರೆಸ್ ಮತ್ಯು ಮುಸ್ಲಿಂಲೀಗ್ ಮುಂದಿಟ್ಟರು. ಅವರು ದೇಶವನ್ನು ವಿಭಜಿಸಿ ಪಾಕಿಸ್ತಾನವನ್ನು ರಚಿಸುವ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿದರು. ಈ ಯೋಜನೆಗೆ ಕಾಂಗ್ರೆಸ್ ಹಾಗೂ ಮುಸ್ಲಿಂಲೀಗ್‍ಗಳು ಒಪ್ಪಿದವು. ಪಾಕಿಸ್ತಾನ ರಚನೆಗೆ ದಾರಿ ಸುಗಮಗೊಂಡಿತು.

➤ 2.ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆ : 
ಭಾರತೀಯ ಸ್ವಾತಂತ್ರ್ಯ ಕಾಯಿದೆ, 1947 ರ ಪ್ರಕಾರ ಆಗಸ್ಟ್ 15, 1947 ರಂದು ಭಾರತ ಇಬ್ಬಾಗಗೊಂಡು, ಪಾಕಿಸ್ತಾನ ರಚನೆಗೊಂಡಿತಲ್ಲದೆ, ದೇಶಕ್ಕೆ ಸ್ವಾತಮತ್ರ್ಯ ಲಭಿಸಿತು. ಲಾರ್ಡ್ ಮೌಂಟ್ ಬ್ಯಾಟೆನ್ ನಂತರ ಸಿ. ರಾಜಗೋಪಾಲಾಚಾರಿಯವರು ಭಾರತದ ಗವರ್ನರ್ ಜನರಲ್ ಆದರು. ಜವಾಹರಲಾಲ್ ನೆಹರೂರವರು ಭಾರತದ ಪ್ರಧಾನಮಂತ್ರಿಯಾದರು.

# ಇದನ್ನೂ ಓದಿ..
ಭಾರತದ ಇತಿಹಾಸ – ಭಾಗ -1 : ಪ್ರಾಚೀನ ಭಾರತ ]
[ ಭಾರತದ ಇತಿಹಾಸ – ಭಾಗ – 2 : ಮಧ್ಯಕಾಲೀನ ಭಾರತ ]

Comments

No comments yet. Why don’t you start the discussion?

Leave a Reply

Your email address will not be published. Required fields are marked *