ಡಾ. ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು 1938 ನವಂಬರ 28ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ.
ಡಾ ಎಂ. ಎಂ. ಕಲಬುರ್ಗಿಯವರನ್ನು ವಿದ್ವಾಂಸರು ಸಮಗ್ರ ಸಂಶೋಧಕ ಎಂದು ಗುರುತಿಸುತ್ತಾರೆ. ಸಂಶೋಧನೆಗೆ ಅವಶ್ಯವಿರುವ ಆಕರ ಶೋಧ, ಶೋಧಿತ ಆಕರಗಳ ವಿಶ್ಲೇಷಣೆ, ವಿಶ್ಲೇಷಿತ ಆಕರಗಳ ವ್ಯಾಖ್ಯಾನ – ಈ ಮೂರು ಹಂತಗಳಲ್ಲಿ ಅವರು ದುಡಿದುದೇ ಈ ಗುರುತಿಸುವಿಕೆಗೆ ಕಾರಣ.
ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗಪಡಿಸಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ ಎಂಬ ಧ್ಯೇಯಕ್ಕೆ ಬದ್ಧರಾಗಿ ಇವರು ತಮ್ಮ ಬರವಣಿಗೆಯನ್ನು ವರ್ತಮಾನಕ್ಕೆ ಅನ್ವಯಿಸುತ್ತ ಬಂದುದೂ ಇನ್ನೊಂದು ಕಾರಣವಾಗಿದೆ. ಇವರು ವಿಶ್ಲೇಷಣೆಯ ಮೂಲಕ ಗತಕಾಲದ ಕಾರ್ಯಶೋಧವನ್ನು ವ್ಯಾಖ್ಯಾನದ ಮೂಲಕ ಕಾರ್ಯಶೋಧದ ಹಿಂದಿನ ಕಾರಣಶೋಧವನ್ನು ಮತ್ತು ಮುಂದಿನ ಪರಿಣಾಮಶೋಧಗಳನ್ನು ಪೂರೈಸುವ ಕಾರಣದಿಂದಲೂ ಸಮಗ್ರ ಸಂಶೋಧಕರೆನಿಸಿದ್ದಾರೆ.
ಸಂಶೋಧಕರಾಗಿರುವಂತೆಯೇ ಸೃಜನಶೀಲ ನೆಲೆಯಲ್ಲಿಯೂ ತಮ್ಮನ್ನು ಗುರುತಿಸಿಕೊಂಡ ಅವರು, ತಮ್ಮ ಪಾಂಡಿತ್ಯ, ಸತತ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ನಾಡಿನ ವಿದ್ವಜ್ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ ಹಾಗೂ ವಚನ ಸಾಹಿತ್ಯಗಳ ಬಗೆಗಿನ ಅವರ ಸ್ಮರಣಶಕ್ತಿ ಮತ್ತು ವಿದ್ವತ್ತುಗಳು ಸದಾಕಾಲಕ್ಕೂ ಬೆರಗು ಹುಟ್ಟಿಸುವಂಥವು.
ಬಿಸಿಲು ನಾಡಿನ ವಿಜಾಪುರ ಜಿಲ್ಲೆಯಿಂದ ಬಂದವ ಇವರು ಸಿಂದಗಿ ತಾಲೂಕಿನ ಶ್ರಮಸಂಸ್ಕೃತಿಯ ಮಡಿವಾಳಪ್ಪ ಮತ್ತು ಗುರಮ್ಮ ದಂಪತಿಗಳ ಮೂರನೆ ಮಗನಾಗಿ 1938ರಲ್ಲಿ ಜನಿಸಿದರು. ಅವರು 1968ರಲ್ಲಿ ಕವಿರಾಜ ಮಾಗ್ರ ಪರಿಸರದ ಕನ್ನಡ ಸಾಹಿತ್ಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದರು. ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರವಾಚಕರಾಗಿ ಪ್ರಾಧ್ಯಾಪಕರಾಗಿ 1983ರವರೆಗೆ ಸೇವೆಯನ್ನು ಸಲ್ಲಿಸಿದರು.
ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಂಘದ ಮೂಲಕ ವಿದ್ಯಾರ್ಥಿ ಭಾರತಿ ಪತ್ರಿಕೆಯನ್ನು ಆರಂಭಿಸಿದರು. ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, ಸಂಸ್ಕೃತಿ ಸಮ್ಮೇಳನಗಳು ಇವರ ಕನಸಿನ ಸೃಷ್ಟಿಗಳಾಗಿವೆ. 1982ರಲ್ಲಿ 40 ದಿನಗಳ ಕಾಲ ಇಂಗ್ಲೆಂಡ್ ಕೇಂಬ್ರಿಜ್ ಆಕ್ಸ್ಫರ್ಡ್ ಗಳಿಗೆ ಭೇಟಿ ನೀಡಿ ಕನ್ನಡ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1980ರಿಂದ 8 ವರ್ಷಗಳ ಕಾಲ ಬಸವೇಶ್ವರ ಪೀಠದ ಪ್ರಾಧ್ಯಾಪಕರಾಗಿ ಶರಣ ಸಾಹಿತ್ಯದ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಉತ್ತೇಜನ ನೀಡಿದರು.
ಇವೆಲ್ಲವುಗಳಿಗೆ ಕಳಸವಿಟ್ಟಂತೆ 1998ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಕನ್ನಡದ ರಥವನ್ನು ಎಳೆಯುವಲ್ಲಿ ಕೈಕೂಡಿಸಿದರು. ಈ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಪ್ರಕಟಣೆಗಳು ವೇಗವನ್ನು ಪಡೆದುಕೊಂಡಾವು. ಹಸ್ತಪ್ರತಿ ವಿಭಾಗದಲ್ಲಿ ಹಸ್ತಪ್ರತಿ ಗ್ರಂಥಾಲಯವನ್ನು ಅಸ್ತಿತ್ವಕ್ಕೆ ತಂದು, ಪ್ರಾಚೀನ ಕೃತಿಗಳ ಸಂಪಾದನೆ, ಹಸ್ತಪ್ರತಿ ಸೂಚಿಗಳ ಪ್ರಕಟಣೆಗೆ ಪ್ರೇರಕರಾದರು. ಗ್ರಾಮ ಚರಿತ್ರೆ ಕೋಶಗಳ ನಿರ್ಮಾಣದ ಕನಸನ್ನು ಕಂಡು ಅದು ಜಾನಪದ ವಿಶ್ವವಿದ್ಯಾಲಯದಲ್ಲಿ ಒಂದು ಯೋಜನೆಯಾಗಿ ಮುಂದುವರಿಯಲು ಕಾರಣರಾದರು.
ಕವನ, ನಾಟಕ, ಪ್ರಬಂಧ ಇತ್ಯಾದಿ ಸೃಜನಶೀಲ ಸಾಹಿತ್ಯದೊಂದಿಗೆ ಬೃಹತ್ತಾದ ಮತ್ತು ಮಹತ್ತಾದ ಸಂಶೋಧನಾ ಸಾಹಿತ್ಯವನ್ನು 50 ವರ್ಷಗಳಲ್ಲಿ 107 ಕೃತಿಗಳನ್ನು ಪ್ರಕಟಿಸಿದರು. ಬಹಳಷ್ಟು ವಿಷಯಗಳ ಕೃತಿರಚನೆಯಲ್ಲಿ ಇವರು ಮೊದಲಿಗರು. ಬಸವಣ್ಣನವರನ್ನು ಕುರಿತು ಶಾಸನ್ಗಳು, ಇವರ ಮೊಟ್ಟಮೊದಲ ಕೃತಿಯಾಗಿದೆ.
ತದನಂತರ ಧಾರವಾಡ ಜಿಲ್ಲೆಯ ಶಾಸನ ಸೂಚಿ, ವಿಜಾಪುರ ಜಿಲ್ಲೆಯ ಶಾಸನ ಸೂಚಿಗಳನ್ನು ಸಂಪಾದಿಸಿದರು. ಅವರ ಮಹತ್ವದ ಸಂಪಾದಿತ ಕೃತಿಗಳೆಂದರೆ ಬಸವಣ್ನನವರ ಟೀಕಿನ ವಚನಗಳು, ಕರ್ನಾಟಕದ ಕೈಫಿಯತ್ತುಗಳು, ಹರಿಹರನ ರಗಳೆಗಳು, ಕನ್ನಡ ಶರಣರ ಕಥೆಗಳು, ಕಿತ್ತೂರು ಸಂಸ್ಥಾನ ಸಾಹಿತ್ಯ ಇತ್ಯಾದಿ.
ವ್ಯಕ್ತಿಗಳು ಮತ್ತು ಅವರ ಸಾಧನೆಗಳ ಕುರಿತಾಗಿ ಕಲಬುರ್ಗಿಯವರ ಆಸಕ್ತಿ ಅಪಾರ. ಆ ಕಾರಣ ದಿಂದಾಗಿಯೇ ಅರಟಾಳ ರುದ್ರಗೌಡರ ಚರಿತ್ರೆ, ಮಡಿವಾಳಪ್ಪ ಸಾಸನೂರ, ಗುರುಗಳಾದ ಬಿ.ಟಿ. ಸಾಸನೂರ ಅವರ ಕುರಿತಾಗಿ ವಜ್ರ ಕುಸುಮ, ಹರ್ಡೇಕರ್ ಮಂಜಪ್ಪನವರ ಕುರಿತು 2 ಸಂಪುಟಗಳನ್ನು ಹೊರತರಲು ಕಾರಣರಾಗಿದ್ದಾರೆ. ಲಿಂಗಾಯತ ಅರಸು ಮನೆತನಗಳ ಕುರಿತು ವಿಆರ ಸಂಕಿರಣಗಳನ್ನು ಏರ್ಪಡಿಸಿ, ಸಾರಂಗಶ್ರೀ, ಸ್ವಾದಿ ಅರಸು ಮನೆತನ, ಬೀಳಗಿ ಅರಸು ಮನೆತನ, ಕೆಳದಿ ಸಂಸ್ಥಾನದ ಬಗ್ಗೆ ಅಧ್ಯಯನಗಳನ್ನು ಸಂಪಾದಿಸಿದಾರೆ.
ಡಾ ಕಲಬುರ್ಗಿಯವರು ದೊಡ್ಡ ಸಂಶೋಧಕರಾಗಿರುವಂತೆ ದೊಡ್ಡ ಯೋಜಕರೂ ಹೌದು. ಇದಕ್ಕೆ ನಿದರ್ಶನವೆಂಬಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪ್ರಿಯ ವಚನ ಸಂಪುಟ ಯೋಜನೆ, ಬಸವ ಸಮಿತಿಯಿಂದ 22 ಭಾಷೆಗಳಿಗೆ ವಚನ ಅನುವಾದ ಯೋಜನೆ, ಪತ್ರಾಗಾರ ಇಲಾಖೆಯಿಂದ ಪ್ರಾಚೀನ ಅಪ್ರಕಟಿತ ಸಾಹಿತ್ಯ ಪ್ರಕಟಣೆ, ಹಂಪಿ ವಿಶ್ವವಿದ್ಯಾಲಯದಿಂದ ಕೊಡೇಕಲ್ಲ ಸಂಪ್ರದಾಯ ಸಾಹಿತ್ಯ ಪ್ರಕಟಣೆ ಮುಂತಾದವು.
ಇವರಿಗೆ ಹಲವಾರು ಪುರಸ್ಕಾರಗಳು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 5 ಬಾರಿ ಪುಸ್ತಕ ಬಹುಮಾನ, ಮತ್ತು ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಬಿರುದು ಮುಂತಾದವು.
ಕಲಬುರ್ಗಿಯವರ ಭಾಷೆ ಸೃಜನಶೀಲ ಸಂಶೋಧನೆಗೆ ಅನುರುಪವಾದುದು. ಸಂಶೋಧನೆ ಎನ್ನುವುದು ಅಲ್ಪ ವಿರಾಮ, ಅರ್ಧ ವಿರಾಮಗಲ ಮೂಲಕ ಪೂರ್ಣ ವಿರಾಮಕ್ಕೆ ಸಾಗುವ ಕ್ರಿಯೆ, ಸಂಶೋಧಕ ತಪ್ಪು ಹೇಳಿರಬಹುದು, ಸುಳ್ಳು ಹೇಳಿರಲಾರ ಇತ್ಯಾದಿ ಸಾರ್ವಕಾಲಿಕ ಮಾತುಗಳನ್ನು ಅವರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅವರೇ ಹೇಳಿಕೊಳ್ಳುವಂತೆ ಅವರ ಮೊದಲ ಪ್ರೀತಿ ವಿದ್ಯಾರ್ಥಿಗಳು, ಎರಡನೆಯ ಪ್ರೀತಿ ಪುಸ್ತಕಗಳು, ಮೂರನೆಯ ಪ್ರೀತಿ ಹೆಂಡತಿ. ಅವರು ಕೇವಲ ವ್ಯಕ್ತಿಯಾಗದೆ ಶಕ್ತಿಯೂ ಹೌದು, 2015ರ ಆಗಸ್ಟ 20ರಂದು ಹಂತಕರ ಗುಂಡಿಗೆ ಬಲಿಯಾದರು.
# ಶಿಕ್ಷಣ :
ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು.ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ ನಲ್ಲಿ ಬಿ.ಎ.(ಕನ್ನಡ) ಪದವಿಯನ್ನು ಯು.ಜಿ.ಸಿ. ಶಿಷ್ಯವೇತನದ ಸಹಾಯ ಪಡೆದು ಪ್ರಥಮ ವರ್ಗದಲ್ಲಿ ಮತ್ತು ಪ್ರಥಮ ರ್ಯಾಂಕ್ನೊಂದಿಗೆ ಗಳಿಸಿದರು. ಬಳಿಕ, 1962ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು.
# ಕೃತಿಗಳು
ನೀರು ನೀರಡಿಸಿತ್ತು (ಕವನ ಸಂಕಲನ)
ಕೆಟ್ಟಿತ್ತು ಕಲ್ಯಾಣ ( ನಾಟಕ)
# ಸಂಶೋಧನಾ ಗ್ರಂಥಗಳು
ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, 1973
ಮಾರ್ಗ’ – ನಾಲ್ಕು ಸಂಪುಟಗಳು 1988-2004
ಐತಿಹಾಸಿಕ’, 1984
ಮಾರ್ಗ (1,2,3,4)
ಕನ್ನಡ ನಾಮವಿಜ್ಞಾನ
ಮಹಾರಾಷ್ಟ್ರದ ಕನ್ನಡ ಶಾಸನಗಳು
ಶಾಸನಗಳಲ್ಲಿ ಶಿವಶರಣರು
ಶಬ್ದಮಣಿದರ್ಪಣ ಸಂಗ್ರಹ
ಕನ್ನಡ ಕೈಫಿಯತ್ತುಗಳು
ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
ಸ್ವಾದಿ ಅರಸು ಮನೆತನ
ಸಾರಂಗಶ್ರೀ
# ಶಾಸನಶಾಸ್ತ್ರ :
ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975
ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980
ಶಾಸನ ಸಂಪದ, 1968
ಧಾರವಾಡ ಜಿಲ್ಲೆಯ ಶಾಸನಸೂಚಿ, 1975
# ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು :
ಕನ್ನಡ ಗ್ರಂಥಸಂಪಾದನಾಶಾಸ್ತ್ರ, 1972
ಕನ್ನಡ ಹಸ್ತಪ್ರತಿಶಾಸ್ತ್ರ
ಕನ್ನಡ ಸಂಶೋಧನಾಶಾಸ್ತ್ರ
ಕನ್ನಡ ಸ್ಥಳನಾಮವಿಜ್ಞಾನ
# ಗ್ರಂಥಸಂಪಾದನೆ
ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
ಶಿವಯೋಗ ಪ್ರದೀಪಿಕಾ, 1976
ಕೊಂಡಗುಳಿ ಕೇಶಿರಾಜನ ಕೃತಿಗಳು, 1978
ಬಸವಣ್ಣನ ಟೀಕಿನ ವಚನಗಳು. 1978
ಸಿರುಮನಾಯಕನ ಸಾಂಗತ್ಯ, 1983.
# ಜಾನಪದ :
ಜಾನಪದ ಮಾರ್ಗ, 1995
ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978
# ಸಂಪಾದನೆ :
ಕನ್ನಡ ವಿಶ್ವವಿದ್ಯಾಲಯದ ಮೂಲಕ (1)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (2)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.
# ಪ್ರಶಸ್ತಿಗಳು :
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ.
‘ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ’
‘ಆರು ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಪಂಪ ಪ್ರಶಸ್ತಿ’, ‘ವರ್ಧಮಾನ ಪ್ರಶಸ್ತಿ’, ‘ವಿಶ್ವಮಾನವ ಪ್ರಶಸ್ತಿ’, 2006ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ
ಡಾ. ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernce ಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ “ಆಳ್ವಾಸ್ ನುಡಿಸಿರಿ 2011” ಇದರ ಸರ್ವಾಧ್ಯಕ್ಷರಾಗಿದ್ದರು.
# ಹತ್ಯೆ :
30ನೇ ಆಗಸ್ಟ್, 2015ರಂದು, ಮುಸುಕುಧಾರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದರು. ಧಾರವಾಡದಲ್ಲಿನ ಅವರ ಮನೆಗೆ ನುಗ್ಗಿದ ಅಪರಿಚಿತ ದಾಳಿಕೋರರು ಹಾರಿಸಿದ ಎರಡು ಸುತ್ತು ಗುಂಡುಗಳು ಹಣೆ ಮತ್ತು ಎದೆಗೆ ತಗುಲಿದ್ದವು. ಕಲಬುರ್ಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು