# ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ :
ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಡಾ.ಮನಾಲಿ ದೇಸಾಯಿ ನೇಮಕಗೊಂಡಿದ್ದಾರೆ. ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಇವರು, ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಲಂಡನ್ ವಿಶ್ವವಿದ್ಯಾನಿಲಯದ ಒಂದು ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಂಪ್ಯಾರಿಟಿವ್ ಆಯಂಡ್ ಹಿಸ್ಟಾರಿಕ್ ಸೋಷಿಯಾಲಜಿಯ ರೀಡರ್ ಹಾಗೂ ನ್ಯೂನ್‌ಹ್ಯಾಮ್ ಕಾಲೇಜಿನ ಫೆಲೋ ಆಗಿರುವ ಮನಾಲಿಯವರು, ಸಾಮಾಜಿಕ ಚಳವಳಿಗಳು, ಜನಾಂಗೀಯ ಮತ್ತು ಲಿಂಗಭೇದದ ಹಿಂಸಾಚಾರ ಮತ್ತು ವಸಾಹತೋತ್ತರ ಅಧ್ಯಯನಗಳ ಮೇಲೆ ಸಾಕಷ್ಟು ಸಂಶೋಧನೆ ನಡೆಸಿರುವುದಾಗಿ ವರದಿ ಹೇಳಿದೆ.
# ಎಚ್ಐವಿ ಗೆದ್ದಿದ್ದ ವಿಶ್ವದ ಮೊದಲ ವ್ಯಕ್ತಿ ನಿಧನ :
ಎಚ್ ಐವಿ ರೋಗದಿಂದ ಸಂಪೂರ್ಣ ಗುಣಮುಖರಾದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ವ್ಯಕ್ತಿ ಟಿಮೋತಿ ರೇ ಬ್ರೌನ್ ರಕ್ತ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. 2007 ರಲ್ಲಿ ಬರ್ಲಿನ್ ನಲ್ಲಿ ಚಿಕಿತ್ಸೆಯಿಂದ ಎಚ್ ಐವಿ ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದ ಬ್ರೌನ್ ರಕ್ತ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬ್ರೌನ್ ಎಚ್ ಐವಿಯಿಂದ ಗುಣ ಹೊಂದಿದ್ದರಿಂದ ಅವರನ್ನು ಬರ್ಲಿನ್ ಪೇಷೆಂಟ್ ಎಂದೇ ಕರೆಯಲಾಗುತ್ತಿತ್ತು. ಆದರೆ ಅವರಿಗೆ ಬುಧವಾರ ನಿಧನ ಹೊಂದಿದ್ದಾರೆ ಎಂದು ಗೆಳೆಯ ಟಿಮ್ ಹೋಫ್ ಜೆನ್ ತಿಳಿಸಿದ್ದಾರೆ.
# ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ :
ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಒಳಗೊಂಡ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ ಪರೀಕ್ಷೆಯು ಯಶಸ್ವಿಯಾಗಿ ಒಡಿಶಾದ ಪರೀಕ್ಷಾ ಕೇಂದ್ರದಲ್ಲಿ ನಡೆಯಿತು. ‘ಆತ್ಮನಿರ್ಭರ ಭಾರತ’ ಕಲ್ಪನೆ ಅಡಿಯಲ್ಲಿ . ‘ಸ್ವದೇಶಿಯಾಗಿ ನಿರ್ಮಿಸಿದ ಬೂಸ್ಟರ್, ಏರ್‌ಫ್ರೇಮ್ ಸೇರಿದಂತೆ ಹಲವು ದೇಶೀಯ ತಂತ್ರಜ್ಞಾನಗಳನ್ನು ಹೊಂದಿರುವ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು.
ವಿಶೇಷತೆಗಳೇನು..?
* 400 ಕಿ.ಮೀ. ದೂರದವರೆಗೂ ಕ್ರಮಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ’
* ಕ್ಷಿಪಣಿಯು ಪ್ರತಿ ಗಂಟೆಗೆ ಅಂದಾಜು 3,457 ಕಿ.ಮೀ ವೇಗದಲ್ಲಿ ಗುರಿಯತ್ತ ಚಿಮ್ಮಲಿದೆ
* ಜಲಾಂತರ್ಗಾಮಿ, ಯುದ್ಧ ಹಡಗುಗಳು ಮತ್ತು ಯುದ್ಧ ವಿಮಾನಗಳು ಅಥವಾ ನೆಲದಿಂದಲೂ ದಾಳಿ ನಡೆಸಲು ಈ ಕ್ಷಿಪಣಿಗಳನ್ನು ಉಪಯೋಗಿಸಬಹುದಾಗಿದೆ.
* 450 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದಾಳಿ ನಡೆಸುವ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯದ ಪರೀಕ್ಷೆಯನ್ನು 2017ರ ಮಾರ್ಚ್ 11ರಂದು ಕೈಗೊಳ್ಳಲಾಗಿತ್ತು. ಬಳಿಕ, ನೆಲದಿಂದ ಕಡಿಮೆ ದೂರದಲ್ಲಿ ದಾಳಿ ನಡೆಸುವ ಸಾಮರ್ಥ್ಯದ ಬಗ್ಗೆ 2019ರ ಸೆಪ್ಟೆಂಬರ್ 30ರಂದು ನಡೆಸಲಾಗಿತ್ತು.
* ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒಎಂ ಸಂಸ್ಥೆಗಳು ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ.
*ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಬಳಿ ಈಗಾಗಲೇ ಕಾರ್ಯಾಚರಣೆಯಲ್ಲಿ ಇರುವ ‘ಬ್ರಹ್ಮೋಸ್’ ಅನ್ನು ಜಗತ್ತಿನಲ್ಲೇ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಎಂದು ಪರಿಗಣಿಸಲಾಗಿದೆ.
# ‘ವಿಕ್ರಮ ಬೇತಾಳ’ ಸೃಷ್ಟಿಕರ್ತ ಕಲಾವಿದ ಇನ್ನಿಲ್ಲ :
‘ಚಂದಮಾಮ’ ಮಕ್ಕಳ ಪುಸ್ತಕದಲ್ಲಿ ‘ವಿಕ್ರಮ ಮತ್ತು ಬೇತಾಳ’ ಪಾತ್ರಗಳನ್ನು ಕುಂಚದಲ್ಲಿ ಚಿತ್ರಿಸಿದ್ದ ಕಲಾವಿದ ಕೆ.ಸಿ. ಶಿವಶಂಕರ (97) ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಮೂಲ ಚಂದಮಾಮ ವಿನ್ಯಾಸ ತಂಡದ ಪೈಕಿ ಇವರೊಬ್ಬರು ಮಾತ್ರ ಈವರೆಗೆ ಬದುಕಿದ್ದರು. 1960ರ ದಶಕದಲ್ಲಿ ಅವರು ರಚಿಸಿದ್ದ ಚಿತ್ರಗಳು ಸಾಕಷ್ಟು ಖ್ಯಾತಿ ಪಡೆದಿದ್ದವು. ವಿಕ್ರಮ ಮತ್ತು ಬೇತಾಳ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇಂತಹ ಸಾವಿರಾರು ಕಲಾಕೃತಿಗಳು ಅವರ ಕುಂಚದಲ್ಲಿ ಮೂಡಿವೆ. ದಶಕಗಳ ಕಾಲ ಈ ಚಿತ್ರಗಳು ಮಕ್ಕಳು ಹಾಗೂ ಚಿತ್ರಪ್ರೇಮಿಗಳನ್ನು ಸೆಳೆದಿದ್ದವು. ಅವರು ಭಾರತೀಯ, ಓರಿಯಂಟಲ್, ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ಕಲಾತ್ಮಕ ಸಂಪ್ರದಾಯಗಳಿಂದ ಪ್ರಭಾವಿತವಾದ ಶೈಲಿಯೊಂದಿಗೆ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು.1924ರ ಜುಲೈ 19ರಂದು ತಮಿಳುನಾಡಿನ ಈರೋಡಿನಲ್ಲಿ ಶಿವಶಂಕರನ್ ಜನಿಸಿದರು. ಶಾಲೆಯಲ್ಲಿ ಓದುವಾಗ ಇತಿಹಾಸ ಪುಸ್ತಕದಲ್ಲಿ ಬರುವ ಐತಿಹಾಸಿಕ ವ್ಯಕ್ತಿಗಳನ್ನು ರೇಖೆಗಳಲ್ಲಿ ಮೂಡಿಸುವ ಹವ್ಯಾಸ ಬೆಳೆಸಿಕೊಂಡರು. ಚೆನ್ನೈನ ಸರ್ಕಾರಿ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಚಿತ್ರ ಕಲಾವಿದರಾಗಿ ‘ಕಲೈಮಗಳ್’ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಅವರು, ಚಂದಮಾಮ ಪುಸ್ತಕದ ತಮ್ಮ ಅಮೂಲ್ಯ ಚಿತ್ರಗಳಿಂದಾಗಿ ಗುರುತಿಸಿಕೊಂಡಿದ್ದರು.
# ಮುಕೇಶ್ ಅಂಬಾನಿ ನಂ.1 ಸಿರಿವಂತ :
ಹರೂನ್ ಇಂಡಿಯಾ ಸಿದ್ಧಪಡಿಸಿರುವ 2020ನೇ ಸಾಲಿನ ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸತತ ಒಂಭತ್ತನೆಯ ವರ್ಷದಲ್ಲಿಯೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ. ಹರೂನ್ ಸಿದ್ಧಪಡಿಸುವ ವಿಶ್ವದ ಐದು ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹ್ಯಾಪಿಯೆಸ್ಟ್ ಮೈಂಡ್ಸ್ ಕಂಪನಿಯ ಸಂಸ್ಥಾಪಕ ಅಶೋಕ್ ಸೂಟಾ ಅವರು ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇರುವ ಅತ್ಯಂತ ಶ್ರೀಮಂತ ಮಹಿಳೆ ಸ್ಮಿತಾ ವಿ. ಕೃಷ್ಣ. ಇವರ ನಂತರದ ಸ್ಥಾನದಲ್ಲಿರುವ ಮಹಿಳೆ ಕಿರಣ್ ಮಜುಮ್ದಾರ್ ಶಾ
# ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಆಮ್ನೆಸ್ಟಿ :
ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್, ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಮಾನವ ಹಕ್ಕುಗಳ ಸಂಸ್ಥೆಗಳಿಗೆ ಸರ್ಕಾರ ನಿರಂತರವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಆಮ್ನೆಸ್ಟಿ, ‘ಸೆ.10ರಂದು ನಮ್ಮ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರುವುದು(ಫ್ರೀಜ್) ಗಮನಕ್ಕೆ ಬಂದಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬೇಕಾದ ಸ್ಥಿತಿ ಎದುರಾಗಿದೆ. ಜೊತೆಗೆ ಎಲ್ಲ ಅಭಿಯಾನಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
# ಎಫ್ಟಿಐಐ ಅಧ್ಯಕ್ಷರಾಗಿ ಶೇಖರ್ ಕಪೂರ್ ನೇಮಕ :
ಫಿಲ್ಮ್ ಆಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ನೂತನ ಅಧ್ಯಕ್ಷರಾಗಿ ಚಿತ್ರ ನಿರ್ದೇಶಕ ಶೇಖರ್ ಕಪೂರ್ ಅವರನ್ನು ನೇಮಿಸಲಾಗಿದೆ. ಫಿಲ್ಮ್ ಆಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ಟಿಐಐ) ನೂತನ ಅಧ್ಯಕ್ಷ ಹಾಗೂ ಎಫ್ಟಿಐಐ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ಶೇಖರ್ ಕಪೂರ್ ಅವರನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನೇಮಕ ಮಾಡಿದೆ. ಶೇಖರ್ ಕಪೂರ್ ಅವರ ಅಧಿಕಾರಾವಧಿ 2023ರ ಮಾರ್ಚ್ 3ರ ವರೆಗೆ ಇರಲಿದೆ. 1945ರ ಡಿ. 6ರಂದು ಪಾಕಿಸ್ತಾನದ ಲಾಹೋರ್ನಲ್ಲಿ ಜನಿಸಿದ್ದ ಕಪೂರ್, ಹಿಂದಿ ಹಾಗೂ ಅಂತಾರಾಷ್ಟ್ರೀಯ ಸಿನಿಮಾರಂಗದಲ್ಲಿ ಖ್ಯಾತರು. ಎಲಿಜಬೆತ್, ಬ್ಯಾಂಡಿಟ್ ಕ್ವೀನ್, ದ ಫೋರ್ ಫೆದರ್ಸ್ ಮುಂತಾದ ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ.
# ಕುವೈತ್ ದೊರೆ ಶೇಕ್ ಸಬಾಹ್ ಅಲ್ ಅಹ್ಮದ್ ನಿಧನ :
ಅರಬ್ ರಾಷ್ಟ್ರ ಕುವೈತ್ ನ ದೊರೆ ಶೇಕ್ ಸಬಾಹ್ ಅಲ್ ಅಹ್ಮದ್ (91) ನಿಧನರಾಗಿದ್ದಾರೆ. ಈ ಮೊದಲೇ ನಿಗದಿಯಾದಂತೆ ಶೇಕ್ ಸಬಾಹ್ ಅವರ ಸಹೋದರ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.