ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳನ್ನೆಲ್ಲ ಕಾಡುವ ಕುತಂತ್ರಾಂಶ ಗಳಿಂದ (ಮಾಲ್ವೇರ್) ಪಾರಾಗಲು ನೆರವಾಗುವ ತಂತ್ರಾಂಶವೇ ಆಂಟಿವೈರಸ್, ಕುತಂತ್ರಾಂಶಗಳನ್ನು ಗುರುತಿಸಿ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿಗೆ ಏನೂ ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.
ಆಂಟಿವೈರಸ್ಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು, ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ “ಸಿಗೇಚರ್’, ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ.
ಹೊಸಹೊಸ ಕುತಂತ್ರಾಂಶ ಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್ಗಳಲ್ಲಿರುತ್ತದೆ).
ಆ್ಯಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ, ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ
ಸಿಗುವಂತೆ ಮಾಡಬಹುದು.
ಇದರಿಂದಾಗಿ ನಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತ ವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್ನಿಂದ ಕುತಂತ್ರಾಂಶ ಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ
ತಪ್ಪಿಸಬಹುದು.