ಆಮ್ಲ ಮಳೆ ಎಂದರೇನು..? ಕಾರಣಗಳು ಮತ್ತು ಪರಿಣಾಮಗಳು
➤ ಆಮ್ಲ ಮಳೆ ಎಂದರೇನು..?
ಸಾಮಾನ್ಯವಾಗಿ ಮಳೆ, ಮಂಜು ಮೊದಲಾದ ರೂಪದಲ್ಲಿ ಆಮ್ಲಗಳು ವಾತಾವರಣದಿಂದ ಭೂಮಿಯ ಮೇಲೆ ಚೆಲ್ಲಲ್ಪಡುವ ಪ್ರಕ್ರಿಯೆಯನ್ನು ‘ಆಮ್ಲಮಳೆ’ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಾತಾವರಣದಲ್ಲಿ ರೂಪುಗೊಳ್ಳುವ ಗಂಧಕಾಮ್ಲ (ಸಲ್ಫೂರಿಕ್ ಆಮ್ಲ) ಮತ್ತು ನೈಟ್ರಿಕ್ ಆಮ್ಲಗಳು ಮಳೆ ನೀರಿನ ಜೊತೆ ಬೆರೆತು ಭೂಮಿಯ ಮೇಲೆ ಸುರಿಯುವದನ್ನು ‘ ಆಮ್ಲ ಮಳೆ’ (Acid Rain)ಎನ್ನಬಹುದು.
➤ ಆಮ್ಲ ಮಳೆಗೆ ಕಾರಣಗಳು :
ವಿಜ್ಞಾನಿಗಳ ಪ್ರಕಾರ ವಾಯುಮಾಲಿನ್ಯ ಉಂಟು ಮಾಡುವ ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್ ಆಮ್ಲ ಮಳೆಗೆ ಮೂಲ ಕಾರಣಗಳು. ಗಂಧಕಯುಕ್ತ ಕಲ್ಲಿದ್ದಲಿನ ಬಳಕೆ, ಪೆಟ್ರೋಲಿಯಂನಂತಹ ಇಂಧನಗಳನ್ನು ಕೈಗಾರಿಕೆ ಮತ್ತು ವಾಹನಗಳಲ್ಲಿ ಉರಿಸಿದಾಗ ಈ ಮಲಿನಕಾರಿ ಅನಿಲಗಳು ಉತ್ಪತ್ತಿಯಾಗಿ ವಾತಾವರಣವನ್ನು ಸೇರಿಕೊಳ್ಳುತ್ತವೆ. ನೈಸರ್ಗಿಕ ಕ್ರಿಯೆಗಳಾದ ಜ್ವಾಲಾಮುಖಿಗಳು ಸಿಡಿಯುವಾಗ ಮತ್ತು ಸಾರಜನಕ ಚಕ್ರದ ಮೂಲಕವೂ ಅಲ್ಪ ಪ್ರಮಾಣದಲ್ಲಿ ಈ ಅನಿಲಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತವೆ.
ಈ ಅನಿಲಗಳು ವಾತಾವರಣದಲ್ಲಿರುವ ನೀರಾವಿ, ಆಕ್ಸಿಜನ್, ಮತ್ತಿತರ ರಾಸಾಯನಿಕಗಳ ಜೊತೆ ಸೇರಿಕೊಂಡು ವಿವಿಧ ರೀತಿಯ ಆಮ್ಲಗಳನ್ನು ಉತ್ಪಾದಿಸುತ್ತದೆ. ಈ ರಾಸಾಯನಿಕ ಕ್ರಿಯೆಗಳು ನಡೆಯಲು ಸೂರ್ಯನ ಕಿರಣಗಳಲ್ಲಿರುವ ಸೌರಶಕ್ತಿ ಅಗತ್ಯ. ಮುಖ್ಯವಾಗಿ ಎರಡು ರೀತಿಯ ಆಮ್ಲ ಗಳು ವಾತಾವರಣದಲ್ಲಿ ಉತ್ಪತ್ತಿಯಾಗುತ್ತದೆ. ಅವುಗಳೆಂದರೆ,
• ಗಂಧಕ ಡೈ ಆಕ್ಸೈಡ್ನಿಂದ ಉತ್ಪತ್ತಿಯಾಗುವ ಗಂಧಕಾಮ್ಲ
• ಸಾರಜನಕದ ಡೈ ಆಕ್ಸೈಡ್ನಿಂದ ಉತ್ಪತ್ತಿಯಾಗುವ ನೈಟ್ರಿಕ್ ಆಮ್ಲ
ಈ ಆಮ್ಲಗಳು ಮಳೆ ನೀರಿನ ಜೊತೆಗೆ ಮಿಶ್ರಣಗೊಂಡಾಗ ಮಳೆ ನೀರು ಆಮ್ಲೀಯಗೊಳ್ಳುತ್ತದೆ. ಇಂತಹ ಆಮ್ಲಿಯ ಗುಣವಿರುವ ಮಳೆ ನೀರಿನಿಂದ ಹಲವಾರು ದುಷ್ಪರಿಣಾಮಗಳಾಗುತ್ತವೆ.
ರಾಸಾಯನಿಕಗಳ ಆಮ್ಲ ಗುಣಗಳನ್ನು ‘ಪಿಹೆಚ್’ ಎಂಬ ಮಾನದಂಡದ ಮೂಲಕ ಅಳೆಯಲಾಗುತ್ತದೆ. ಶುದ್ಧ ನೀರಿನ ಪಿಹೆಚ್ 7 ಆಗಿದ್ದರೆ, ಆಮ್ಲೀಯ ನೀರಿನ ಪಿಎಚ್ ಅದಕ್ಕಿಂತ ಕಡಿಮೆಯಾಗಿರುತ್ತದೆ.
➤ ಆಮ್ಲಮಳೆಯ ಪರಿಣಾಮಗಳು :
ಆಮ್ಲ ಮಳೆಯ ಆಮ್ಲ ಮಿಶ್ರಿತ ನೀರು ನದಿ- ಕೆರೆಗಳನ್ನು ಸೇರಿ ಅಲ್ಲಿನ ಜೀವಿಗಳಿಗೆ ಮತ್ತು ಜೈವಿಕ ಕ್ರಿಯೆಗಳಿಗೆ ಕೆಡಕುಂಟು ಮಾಡುತ್ತದೆ. ಮನುಷ್ಯರು, ಸಸ್ಯಗಳು, ಪ್ರಾಣಿಗಳಲ್ಲದೆ ಕಟ್ಟಡಗಳಂತಹ ಭೌತಿಕ ರಚನೆಗಳಿಗೂ ಕೂಡಾ ಆಮ್ಲ ಮಳೆ ಹಾನಿಯುಂಟು ಮಾಡುತ್ತದೆ. ಆಮ್ಲ ಮಳೆಯ ಕೆಲವು ಪ್ರಮುಖ ದುಷ್ಪರಿಣಾಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
• ಸಸ್ಯಗಳ ಎಲೆಗಳ ಮೇಲ್ಪದರವನ್ನು ಕೊರೆದು ನಾಶಮಾಡುತ್ತದೆ. ಜಲಜೀವಿ, ಸಸ್ಯಗಳನ್ನು ಕೊಲ್ಲುತ್ತದೆ.
• ಮನುಷ್ಯರು ಮತ್ತಿತರ ಪ್ರಾಣಿಗಳ ಚರ್ಮಕ್ಕೆ ಹಾನಿಯುಂಟು ಮಾಡಿ, ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
• ಮಣ್ಣು ಆಮ್ಲಯುಕ್ತವಾಗಿ ಫಲವತ್ತತೆ ಕಳೆದುಕೊಳ್ಳುತ್ತದೆ. ಮಣ್ಣಿನಲ್ಲಿರುವ ಅತ್ಯಗತ್ಯ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕುಂಠಿತಗೊಳ್ಳುತ್ತದೆ.
• ಆಮ್ಲಗಳ ಲೇಪನದಿಂದ ಕಟ್ಟಡಗಳ ಗೋಡೆಗಳಿಗೂ ಹಾನಿಯುಂಟಾಗುತ್ತದೆ. ಲೋಹದ ವಸ್ತುಗಳನ್ನು ಆಮ್ಲ ಕೊರೆಯುತ್ತದೆ.
➤ಆಮ್ಲ ಮಳೆಯ ನಿಯಂತ್ರಣ ಕ್ರಮಗಳು :
ವಾತಾವರಣದ ಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು ಆಮ್ಲ ಮಳೆಯನ್ನು ಕೂಡಾ ಕಡಿಮೆ ಮಾಡಬಲ್ಲವು. ಅವುಗಳೆಂದರೆ,
• ಕಲ್ಲಿದ್ದಲು, ಪೆಟ್ರೋಲುಗಳಂತಹ ಇಂಧನಗಳ ಬಳಕೆಯನ್ನು ತಗ್ಗಿಸುವುದು. ಕಡಿಮೆ ಮಾಲಿನ್ಯ ಮಾಡುವ ನೈಸರ್ಗಿಕ ಅನಿಲಗಳ ಬಳಕೆಯನ್ನು ಹೆಚ್ಚಿಸುವುದು.
• ಗಂಧಕದ ಅಂಶ ಕಡಿಮೆಯಿರುವ ಕಲ್ಲಿದ್ದಲನ್ನು ಇಂಧನವಾಗಿ ಬಳಸಿದರೆ, ಗಂಧಕದ ಡೈ ಆಕ್ಸೈಡ್ನ ಉತ್ಪಾದನೆ ಕಡಿಮೆಯಾಗುತ್ತದೆ.
• ಪರ್ಯಾಯ ಶಕ್ತಿ ಮೂಲಗಳಾದ ಸೌರಶಕ್ತಿ, ಅಣುಶಕ್ತಿ, ಭೂ ಉಷ್ಣಶಕ್ತಿ, ಇತ್ಯಾದಿಗಳ ಬಳಕೆಯನ್ನು ಹೆಚ್ಚಿಸುವುದರಿಂದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಬಳಕೆಯಿಂದಾಗುವ ಮಾಲಿನ್ಯವನ್ನು ನಿಯಂತ್ರಿಸಬಹುದು.
• ವಾಹನಗಳನ್ನು ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳುವುದರಿಂದ ಅವುಗಳು ಉಗುಳುವ ಮಾಲಿನ್ಯಕಾರಿ ಅನಿಲಗಳನ್ನು ಕಡಿಮೆ ಮಾಡಬಹುದು.