ಬ್ರಿಟಿಷ್ ಸರ್ಕಾರ ಮತ್ತು ದೇಶೀಯ-ಸಂಸ್ಥಾನಗಳ ಸಂಬಂಧಗಳು

ಬ್ರಿಟಿಷ್ ಸರ್ಕಾರ ಮತ್ತು ದೇಶೀಯ-ಸಂಸ್ಥಾನಗಳ ಸಂಬಂಧಗಳು

ಭಾರತದಲ್ಲಿ ದೇಶೀಯ ಸಂಸ್ಥಾನಗಳನ್ನು ರಾಜರು ಆಳುತ್ತಿದ್ದರು. ರಾಜ ಪ್ರಭುತ್ವವಿದ್ದ ಇವುಗಳನ್ನು ಭಾರತ ಭೂಪಟದಲ್ಲಿ ಹಳದಿ ಬಣ್ಣದಿಂದ ಗುರುತಿಸಲಾಗಿತ್ತು. ಇವುಗಳ ಭೂಪ್ರದೇಶ ಸುಮಾರು 6,75,267 ಚದರ ಮೈಲಿಗಳಷ್ಟು ಇತ್ತು. ಈ ದೇಶೀಯ ಸಂಸ್ಥಾನಗಳ ಸಂಖ್ಯೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

1927ರಲ್ಲಿ ಬ್ರಿಟಿಷ್ ಸರ್ಕಾರ ತನ್ನ ಮತ್ತು ದೇಶೀಯ ಸಂಸ್ಥಾನಗಳ ನಡುವಣ ಸಂಬಂಧವನ್ನು ಅಧ್ಯಯನ ಮಾಡಲು ಬಟ್ಲರ್ ಸಮಿತಿಯನ್ನು (Butler Committee) ನೇಮಿಸಿತು. ಈ ಸಮಿತಿಯ ವರದಿ ಪ್ರಕಾರ ಸುಮಾರು 562 ರಾಜ-ಸಂಸ್ಥಾನಗಳಿದ್ದವು. ಒಬ್ಬ ಲೇಖಕರು ಕೂಡ ಇವುಗಳ ಸಂಖ್ಯೆ 562 ಇದ್ದವು ಎಂದಿದ್ದಾರೆ.

ಸರ್‌ವಾರರ್‌ಲೀ ತಮ್ಮ ಅಭಿಪ್ರಾಯವನ್ನು ತಿಳಿಸಿ 693 ಸಂಸ್ಥಾನಗಳು ಇದ್ದವು ಎಂದು ಹೇಳಿದ್ದಾರೆ. ಜೆ. ರಾಮ್ ಮ್ಯಾಕ್‌ಡೊನಾಲ್ಡ್ ಪ್ರಕಾರ 700 ಸಂಸ್ಥಾನಗಳಿದ್ದವು. ಮೈಸೂರು ಸಂಸ್ಥಾನದ ರಾಜರು ಪ್ರಜಾಪ್ರತಿನಿಧಿ ಸಭೆಯನ್ನು 1881ರಲ್ಲಿ ಸ್ಥಾಪಿಸಿ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು.

ದೇಶೀಯ-ಸಂಸ್ಥಾನಗಳು ಆಂತರಿಕವಾಗಿ ಸ್ವಾತಂತ್ರ್ಯವನ್ನು ಹೊಂದಿದ್ದರೂ ಬ್ರಿಟಿಷ್ ಸರ್ಕಾರದ ಸಾರ್ವಭೌಮತೆಗೆ (Paramountcy) ಒಳಗಾಗಿದ್ದವು. ಆದರೆ ಪ್ಯಾರಮೌಂಟ್ ಎಂಬ ಇಂಗ್ಲೀಷ್ ಪದಕ್ಕೆ ನಿಖರವಾದ ಅರ್ಥವನ್ನು ಕೊಟ್ಟಿರಲಿಲ್ಲ. ಬಟ್ಲರ್ ಸಮಿತಿ ಕೂಡ ಈ ಪದಕ್ಕೆ ಸರಿಯಾದ ಅರ್ಥ ವಿವರಣೆ ನೀಡಲಿಲ್ಲ.

ವಿದೇಶಿ ವ್ಯವಹಾರಗಳಿಗೆ ಈ ಸಂಸ್ಥಾನಗಳು ಸ್ವಾತಂತ್ರ್ಯವನ್ನು ಪಡೆದಿರಲಿಲ್ಲವಾದ್ದರಿಂದ ಇವುಗಳು ಇತರ ದೇಶಗಳೊಡನೆ ಯುದ್ಧ ಮಾಡುವಂತಿರಲಿಲ್ಲ ಅಥವಾ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುವಂತಿರಲಿಲ್ಲ. ಇವುಗಳ ರಕ್ಷಣೆ ಬ್ರಿಟಿಷ್ ಸರ್ಕಾರದ ಜವಾಬ್ದಾರಿಯಾಗಿತ್ತು.

ಇವುಗಳನ್ನು ಕ್ರಮಬದ್ಧವಾಗಿ ನಿಯಂತ್ರಿಸಲು 19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರ ಒಂದು ರಾಜಕೀಯ ಇಲಾಖೆಯನ್ನು (Political Department) ಸ್ಥಾಪಿಸಿತು. ಇದರ ಮೂಲಕ ವೈಸ್‌ರಾಯ್ ಈ ಸಂಸ್ಥಾನಗಳ ಮೇಲೆ ತಮ್ಮ ನಿಯಂತ್ರಣವನ್ನು ಚಲಾಯಿಸುತ್ತಿದ್ದರು.

ವೈಸ್‌ರಾಯ್‌ಗೆ ಇವುಗಳ ಬಗ್ಗೆ ಸಲಹೆ ನೀಡಲು ಒಬ್ಬ ರಾಜಕೀಯ ಸಲಹೆಗಾರನ ನೇಮಕವಾಯಿತು. ಫೆಬ್ರವರಿ 8, 1921ರಂದು ನರೇಂದ್ರ ಮಂಡಳಿ (Chamber of Princes) ಸಹ ಅಸ್ತಿತ್ವಕ್ಕೆ ಬಂದಿತು. ವೈಸ್‌ರಾಯ್‌ ಇದರ ಅಧ್ಯಕ್ಷರಾಗಿದ್ದರು ಮತ್ತು ದೇಶೀಯ-ಸಂಸ್ಥಾನಗಳ ಸಮಸ್ಯೆಗಳನ್ನು ಚರ್ಚಿಸಲು ಇದು ವರ್ಷಕ್ಕೊಮ್ಮೆ ಸಭೆ ಸೇರುತ್ತಿತ್ತು.

ಈ ಮಂಡಳಿ ಕೇವಲ ಒಂದು ಆಲೋಚನಾ ಮತ್ತು ಸಲಹಾ ಮಂಡಳಿಯಾಗಿತ್ತೇ ಹೊರತು ಶಾಸನ ರಚಿಸುವ ಅಧಿಕಾರ ಅಥವಾ ಕಾರ್ಯಾಂಗಾಧಿಕಾರ ಇದಕ್ಕೆ ಇರಲಿಲ್ಲ. ದೇಶೀಯ-ಸಂಸ್ಥಾನಗಳು ಬ್ರಿಟಿಷ್ ಸರ್ಕಾರದ ನೇರ ಆಡಳಿತಕ್ಕೆ ಒಳಗಾಗದಿದ್ದರೂ ಪ್ಯಾರಮೌಂಟ್ರಿ ಮೂಲಕ ಅವುಗಳ ಸ್ವಾಯತ್ತತೆಗೆ ಧಕ್ಕೆ ತಂದು ಅವುಗಳ ಮೇಲೂ ತನ್ನ ಸಾಮ್ರಾಜ್ಯಶಾಹಿ ನೀತಿಯನ್ನು ಹೇರಲು ರಾಜಕೀಯ ತಂತ್ರಗಳನ್ನು ಬಳಸಿತು.

ಭಾರತೀಯರಲ್ಲಿ ದೇಶಪ್ರೇಮ, ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಗಳನ್ನು ಉಂಟುಮಾಡಲು ಅನೇಕ ಭಾರತೀಯ ಗಣ್ಯರು ಮತ್ತು ಸುಧಾರಕರು ಶ್ರಮಿಸಿದರು. ರಾಜರಾಮ್‌ಮೋಹನ್‌ರಾಯ್ (1774-1833) 1830ರಲ್ಲಿ ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿ, ಇದರ ಮೂಲಕ ಸಾಮಾಜಿಕ ಮತ್ತು ಶಿಕ್ಷಣ ಸುಧಾರಣೆಗಳನ್ನು ಜಾರಿಗೆ ತರಲು ಹೋರಾಡಿದರು.

ಗತಕಾಲ ಭಾರತದ ವೈಭವಗಳನ್ನು ಸ್ಮರಿಸಿ ಅವುಗಳನ್ನು ಪುನಶ್ಚತನಗೊಳಿಸಲು ಭಾರತೀಯರಿಗೆ ಕರೆ ನೀಡಿದರು. ಇವರು ಭಾರತ ಪುನರುಜೀವನದ (Indian Renaissance) ಪಿತಾಮಹರೆಂದು ಖ್ಯಾತಿ ಪಡೆದರು. ಸ್ವಾಮಿ ದಯಾನಂದ ಸರಸ್ವತಿಯವರು (1824-1883) ವೇದಗಳ ಹೆಸರಾಂತ ವಿದ್ವಾಂಸರಾಗಿ, ‘ಆರ್ಯ ಸಮಾಜವನ್ನು ಸ್ಥಾಪಿಸಿದರು.

ದೇಶಪ್ರೇಮ ಮತ್ತು ಸ್ವಾತಂತ್ರ್ಯಗಳನ್ನು ಒತ್ತಿ ಹೇಳಿ, “ಭಾರತ ಭಾರತೀಯರಿಗೆ” (India for Indians) ಎಂಬ ಘೋಷಣೆಯನ್ನು ಜನಪ್ರಿಯಗೊಳಿಸಿದರು. ಇವರು ಸ್ಥಾಪಿಸಿದ ಆರ್ಯ ಸಮಾಜ ಜಾತಿ ಪದ್ಧತಿಯನ್ನು ಮತ್ತು ವಿಧವಾ ಪದ್ಧತಿಯನ್ನು ನಿರ್ಮೂಲನ ಮಾಡಲು ಹೋರಾಡಿತು.

ದೇಶ ಪ್ರೇಮಿಯಾಗಿದ್ದ ದಯಾನಂದರು ಭಾರತವನ್ನು ಆರ್ಯವರ್ತ, ತತ್ವಜ್ಞಾನಿಗಳ ಮತ್ತು ಚಿನ್ನದ ನಾಡು ಎಂದು ಬಣ್ಣಿಸಿದರು. ಶ್ರೀರಾಮಕೃಷ್ಣ ಪರಮಹಂಸ, ಶ್ರೀ ಸ್ವಾಮಿ ವಿವೇಕಾನಂದ, ಸುರೇಂದ್ರ ನಾತ್ ಬ್ಯಾನರ್ಜಿ ಮುಂತಾದವರು ಭಾರತೀಯರನ್ನು ಹುರಿದುಂಬಿಸಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬುನಾದಿ ಹಾಕಿದರು.