ಅನೇಕ ಸಾಹಸಗಾಥೆಗಳ ಇತಿಹಾಸ ಹೊಂದಿರುವ ಇಸ್ರೋದ ಜಿಎಸ್ಎಲ್ವಿ ರಾಕೆಟ್ ಇಂದು ತನ್ನ ಮಿಷನ್ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸ್ಪೇಸ್ಪೋರ್ಟ್ನಿಂದ ಬೆಳಗ್ಗೆ ಜಿಎಸ್ಎಲ್ವಿ ಎಫ್10 (GSLV F10) ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರು ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲಗೊಂಡಿದೆ. ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗಿದೆ. EOS-3 ಎಂಬ ಭೂ ವೀಕ್ಷಣಾ ಸೆಟಿಲೈಟನ್ನ (Earth Observation Satellite) ರಾಕೆಟ್ ಹೊತ್ತೊಯ್ದಿತ್ತು.
ಬೆಳಗ್ಗೆ ನಿಗದಿಯಂತೆ 5:43ಕ್ಕೆ ಜಿಯೋ ಸಿಂಕ್ರೋನಸ್ ಸೆಟಿಲೈಟ್ ಲಾಂಚ್ ವೆಹಿಕಲ್ ತಂತ್ರಜ್ಞಾನದ 51.70 ಮೀಟರ್ ಎತ್ತರದ ಎಫ್10 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಅದಾದ ಬಳಿಕ ಮೊದಲ ಹಾಗೂ ಎರಡನೇ ಹಂತವೂ ಯಶಸ್ವಿಯಾಗಿ ನಡೆಯಿತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರಯೋಜೆನಿಕ್ ಎಂಜಿನ್ನ ಮೇಲಿನ ಮಟ್ಟದಲ್ಲಿ (Cryogenic Upper Stage) ನಿಶ್ಚಿತ ರೀತಿಯಲ್ಲಿ ಕಿಡಿ (ignition) ಹೊತ್ತಲಿಲ್ಲ. ಹೀಗಾಗಿ, ಸೆಟಿಲೈಟನ್ನು ನಿಗದಿತ ಕಕ್ಷೆಗೆ ಸೇರಿಸಲು ರಾಕೆಟ್ ವಿಫಲಗೊಂಡಿತೆನ್ನಲಾಗಿದೆ.
( ಇಸ್ರೋ-ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) )
# ಏನಿದು EOS-3..?
ರಾಕೆಟ್ನೊಳಗೆ ಇದ್ದ ಭೂ ವೀಕ್ಷಣಾ ಸೆಟಿಲೈಟ್ ಬಹಳ ಮುಖ್ಯವಾದ ಮಿಷನ್ ಹೊಂದಿದೆ. ಇದು ನೈಸರ್ಗಿಕ ವಿಕೋಪ ದುರಂತಗಳು ಸಂಭವಿಸಿದಾಗ ಬಹಳ ತ್ವರಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ನೆರವಾಗಬಲ್ಲುದು. ರಿಯಲ್ ಟೈಮ್ನಲ್ಲಿ ದುರಂತದ ಪ್ರದೇಶಗಳ ಚಿತ್ರಗಳನ್ನ ಇದು ಆಗಾಗ್ಗೆ ಒದಗಿಸುತ್ತದೆ.ಪ್ರಕೃತಿ ವಿಕೋಪ ಘಟನೆಗಳ ಮುನ್ಸೂಚನೆ, ಚಂಡಮಾರುತದ ಪರಿಶೀಲನೆ, ಮೇಘ ಸ್ಫೋಟ, ಸಿಡಿಲು ಇತ್ಯಾದಿ ದುರಂತಗಳನ್ನ ಸಮರ್ಕಪವಾಗಿ ಪರಿಶೀಲನೆ ನಡೆಸಲು ಇದು ನೆರವಾಗುತ್ತದೆ. ಈ ಅರ್ತ್ ಅಬ್ಸರ್ವೇಶನ್ ಸೆಟಿಲೈಟ್ 10 ವರ್ಷದ ಜೀವಿತಾವಧಿ ಹೊಂದಿದೆ.
# ಭಾರತದ ಹೆಮ್ಮೆ ಇಸ್ರೋ :
# ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಭಾರತದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ 1969 ರ ಆಗಸ್ಟ್ 15 ರಂದು ಸ್ಥಾಪಿಸಲಾಯಿತು.
# ಇದರ ಕೆಂದ್ರ ಕಛೇರಿಯು ಬೆಂಗಳೂರಿನಲ್ಲಿದೆ.
# ಇಸ್ರೋದ ಮುಖ್ಯ ಕೇಂದ್ರಗಳು ತಿರುವನಂತಪುರ, ಅಹಮಾದಾಬಾದ್, ಮಹೇಂದ್ರಗಿರಿ, ಹಾಸನ ಮತ್ತು ಶ್ರೀಹರಿಕೋಟಗಳಲ್ಲಿವೆ.
# ಇಸ್ರೋದ ಮುಖ್ಯ ಉದ್ದೇಶವೆಂದರೆ -ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ.
# ಇಸ್ರೋ ಉಪಗ್ರಹಗಳನ್ನು ತಯಾರಿಸುವುದಲ್ಲದೆ, ಉಪಗ್ರಹ ವಿಹಾರಗಳನ್ನು ತಯಾರಿಸುತ್ತದೆ.
# ಪ್ರಸ್ತುತ “ಡಾ. ಕೆ. ಸಿವನ್” ರವರು ಇಸ್ರೋದ ಅಧ್ಯಕ್ಷರಾಗಿದ್ದಾರೆ.
# ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹಾರೆನಿಸಿದ ಡಾ. ವಿಕ್ರಂಸಾರಾಬಾಯಿಯವರು ಇಸ್ರೋ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ.
# ಭಾರತದ ಮೊದಲ ಉಪಗ್ರಹವಾದ “ಆರ್ಯಭಟವನ್ನು” 1975ರಲ್ಲಿ ರಷ್ಯಾದಿಂದ ಉಡಾವಣೆ ಮಾಡಲಾಯಿತು.
# ಇಸ್ರೋದ ಪ್ರಮುಖ ಸಾಧನೆಗಳು :
1. 1972 ಅಂತರಿಕ್ಷ ಇಲಾಖೆಯ ಸ್ಥಾಪನೆ
2. 1975, ಏಪ್ರಿಲ್ 19 ,ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ “ಆರ್ಯಭಟ” ಉಡಾವಣೆ
3. 1980 – ಮೊದಲ ದೇಶೀಯ ನಿರ್ಮಿತ “ರೋಹಿಣಿ” ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾಯಿಸಲಾಯಿತು.
4. 1984 – ಇಂಡೋ- ರಷ್ಯನ್ ಅಂತರಿಕ್ಷಯಾನ, ರಾಕೇಶಶರ್ಮ ಅಂತರಿಕ್ಷಕ್ಕೆ ಸ0ಚರಿಸಿದ ಮೊದಲ ಭಾರತೀರಾದರು.
5. 1993 – ಪಿಎಸ್ಎಲ್ವಿ ರಾಕೆಟ್ನ ಉಡಾವಣೆ ವಿಫಲ
6. 1998 – ಪಿಎಸ್ಎಲ್ವಿ ರಾಕೆಟ್ನ ಎರಡನೇ ಉಡಾವಣೆ ಯಶಸ್ವಿಯಾಯಿತು.
7. 2004 – ಶೈಕ್ಷಣಿಕ ಉಪಗ್ರಹ “ ಎಜುಸ್ಯಾಟ್” ಅನ್ನು ಹೊತ್ತ ಜಿಎಸ್ಎಲ್ವಿ ರಾಕೆಟ್ನ ಉಡಾವಣೆ ಯಶಸ್ವಿ.
8. 2013, ನವೆಂಬರ್ 5 ರಂದು ಆಂದ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರ್ರುವಗಾಮಿ ರಾಕೆಟ್ ಮೂಲಕ “ಮಂಗಳಯಾನ”( ಮಾರ್ಸ್ ಒರ್ಬಿಟರ್ ಮಿಷನ್) ನೌಕೆಯನ್ನು ಉಡಾವಣೆ ಮಾಡಲಾಯಿತು. ಇದನ್ನು ಭಾರತವು ಮಂಗಳಗ್ರಹದ ಅನ್ವೆಷಣೆಗೆ ಕಳುಹಿದ ಉಪಗ್ರಹ. 2014 ಸೆಪ್ಟೆಂಬರ್ 24, ಮಂಗಳನ ಕಕ್ಷೆಗೆ ನೌಕೆ ಪ್ರವೇಶ ಯಶಸ್ವಿ. ಚೊಚ್ಚಲ ಯತ್ನದಲ್ಲಿ ಯಶಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.
9. 2008, ಅಕ್ಟೋಬರ್ 22ರಲ್ಲಿ ಇಸ್ರೋ “ಚಂದ್ರಯಾನ- 1” ಯೋಜನೆಯನ್ನು ಕ್ಯಗೊಂಡಿತು. ಇದನ್ನು ಆಂದ್ರಪ್ರದೇಶಗ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ನವೆಂಬರ್ 8, 2008ರಂದು ಚಂದ್ರಯಾನಕ್ಕೆ ತರಳಿದ ನೌಕೆಯನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.
10. 2019 ,ಜುಲೈ 22 ರಂದು ಆಂದ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಎಸ್ ಎಲ್ವಿ ಎಂಕೆ-3 ರಾಕೆಟ್ ಮೂಲಕ “ಚಂದ್ರಯಾನ -2” ರ ಉಡಾವಣೆ ಮಾಡಲಾಯಿತು. ಇದನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಯೋಜನೆಯಾಗಿತ್ತು. ಚಂದ್ರಯಾನ -2 ರ ಲ್ಯಾಂಡ್ರ್ “ವಿಕ್ರಮ್” ಸೆಪ್ಟೆಂಬರ್ 7, 2019 ರಂದು ಚಂದ್ರನ ನೆಲ ಸ್ಫರ್ಶ ಮಾಡುವ ಸಮಯದ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು.