ರಾಷ್ಟೀಯ ಆದಾಯ ಮತ್ತು ತಲಾ ಆದಾಯ ಎಂದರೇನು..?

ರಾಷ್ಟೀಯ ಆದಾಯ ಮತ್ತು ತಲಾ ಆದಾಯ ಎಂದರೇನು..?

# ‘ರಾಷ್ಟೀಯ ಆದಾಯ’ ಎಂದರೇನು?
‘ ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.’ ‘ರಾಷ್ಟೀಯ ಆದಾಯ’ ವನ್ನು ‘ರಾಷ್ಟೀಯ ಭಾಜ್ಯಾಂಶ'(National dividend), ‘ರಾಷ್ಟೀಯ ಉತ್ಪನ್ನ'(National Output) , ‘ರಾಷ್ಟೀಯ ವೆಚ್ಚ’ (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.

# ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು : (Concepts of National Income):
➤ ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?
ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.
ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)

➤ ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?
ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು ‘ನಿವ್ವಳ ರಾಷ್ಟೀಯ ಉತ್ಪನ್ನ’ ಎನ್ನಲಾಗುತ್ತದೆ.
—> ನಿವ್ವಳ ರಾಷ್ಟೀಯ ಉತ್ಪನ್ನ = ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.

➤ ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?
ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ. ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.

➤ ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?
ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ. ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.

➤ ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
—> ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP – ಸವಕಳಿ ವೆಚ್ಚ.
—> ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP – ಪರೋಕ್ಷ ತೆರಿಗೆ + ಸಹಾಯಧನ.

➤ ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?
ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.

➤ ನೈಜ ರಾಷ್ಟೀಯ ಆದಾಯ (Real National Income) ಎಂದರೇನು?
★ ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.

➤ ತಲಾ ಆದಾಯ (Per Capita Income) ಎಂದರೇನು?
ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ. ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

ತಲಾ ಆದಾಯ = ರಾಷ್ಟೀಯ ಆದಾಯ / ಒಟ್ಟು ಜನಸಂಖ್ಯೆ