ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್

ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್

1780ರಲ್ಲಿ ಜನಿಸಿದ ರಣಜಿತ್ ಸಿಂಗನು ಸಿಖ್‍ರ 12 ಮಿಸ್ಲ್(ಒಕ್ಕೂಟ)ಗಳಲ್ಲಿ ಒಂದಾದ ಸುಖರ್‍ಚಾಕೀಯಾ ಮಿಸ್ಲ್‍ನ ನಾಯಕ ಮಹಾಸಿಂಗ್‍ನ ಮಗ. ಹತ್ತನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡನು. ಅವನು ಸಣ್ಣ ಪ್ರದೇಶದ ಒಕ್ಕೂಟದ ನಾಯಕನಾಗಿದ್ದನು.

ಕಾಬೂಲಿನ ಜಮಾನ್ ಷಾ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಾಗ ರಣಜಿತನು ಅವನಿಗೆ ಸಲ್ಲಿಸಿದ ಸೇವೆಗೆ ಮೆಚ್ಚಿ ‘ರಾಜಾ’ ಎಂಬ ಪದವಿಯೊಂದಿಗೆ ಲಾಹೋರಿನ ರಾಜ್ಯಪಾಲನಾಗಿ ನೇಮಕಗೊಂಡನು. ಆಗ ಅವನಿಗೆ ಹತ್ತೊಂಬತ್ತು ವರ್ಷ. ನಂತರ ವಿಸ್ಮಯಕಾರಿ ರೀತಿಯಲ್ಲಿ ಪ್ರಬಲನಾಗಿ ಬೆಳೆದ. ಸಿಖ್‍ಸಮುದಾಯದ ಮೇಲೆ ಸಂಪೂರ್ಣ ಪರಮಾಧಿಕಾರ ಪಡೆಯುವುದೇ ಅವನ ಪರಮ ಧ್ಯೇಯವಾಗಿತ್ತು.

ಸಟ್ಲೇಜ್ ನದಿಯ ಪಶ್ಚಿಮ ಭಾಗಗಳ ಎಲ್ಲ ಸಿಖ್ ಪ್ರಮುಖರನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಪಂಜಾಬಿನಲ್ಲಿ ತನ್ನದೇ ಸ್ವಂತ ರಾಜ್ಯ ಸ್ಥಾಪಿಸಿದ. 1809ರಲ್ಲಿ ಅಮೃತಸರದಲ್ಲಿ ಇಂಗ್ಲಿಷರೊಡನೆ ‘ನಿರಂತರ ಮೈತ್ರಿ’ ಒಪ್ಪಂದಕ್ಕೆ ಸಹಿಹಾಕಿದನು. ಯುರೋಪಿಯನ್ ಮಾದರಿಯಲ್ಲಿ ಸೈನ್ಯವನ್ನು ಸಂಘಟಿಸಿ ತರಬೇತುಗೊಳಿಸಿದನು. ಇವನ ಸೈನ್ಯವು ಕೇವಲ ಸಿಖ್‍ರಿಗೆ ಸೀಮಿತಗೊಂಡಿರದೆ ಗೂರ್ಖಾಗಳು, ಬಿಹಾರಿಗಳು, ಪಠಾಣರು, ಮುಸಲ್ಮಾನರಿಂದ ಕೂಡಿತ್ತು.

ಲಾಹೋರಿನಲ್ಲಿ ಫಿರಂಗಿಗಳನ್ನು ತಯಾರಿಸಲು ಎರಕ ಹೊಯ್ಯುವ ಕಾರ್ಖಾನೆಯನ್ನು ತೆರೆದನು. ಅಂದಿನ ಕಾಲದಲ್ಲಿದ್ದ ಭಾರತೀಯ ರಾಜರ ಸೈನ್ಯಗಳಲ್ಲಿಯೇ ರಣಜಿತ್ ಸಿಂಗನ ಸೈನ್ಯ ಅತ್ಯುತ್ತಮವಾಗಿತ್ತು. ಜಾತ್ಯತೀತ ಮನೋಭಾವದವನೂ, ಉದಾರ ಹೃದಯಿಯೂ ಆದ ರಣಜಿತ್ ಸಿಂಗನು ಸಿಖ್ ಗುರುಗಳನ್ನಲ್ಲದೆ ಹಿಂದೂ ಮತ್ತು ಮುಸಲ್ಮಾನ ಗುರುಗಳನ್ನೂ ಪೋಷಿಸುತ್ತಿದ್ದನು.

ಎಲ್ಲ ಧರ್ಮಿಯರೂ ಅವನ ಆಡಳಿತದ ಉನ್ನತ ಸ್ಥಾನದಲ್ಲಿದ್ದರು. ಬ್ರಿಟಿಷರನ್ನು ಎದುರು ಹಾಕಿಕೊಳ್ಳದೆ ಸಿಖ್ ರಾಜ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾದನು. ಅದೇ ರೀತಿ ಬ್ರಿಟಿಷರು ವಾಯುವ್ಯದ ಭಾಗದಿಂದ ನಡೆಯಬಹುದಾದ ಸಂಭಾವ್ಯ ದಾಳಿಗಳನ್ನು ತಡೆಯಲು ರಣಜಿತ್ ಸಿಂಗನ ರಾಜ್ಯದಂತಹ ರಕ್ಷಣಾ ರಾಜ್ಯವೊಂದರ (ಬಫರ್ ಸ್ಟೇಟ್) ಅವಶ್ಯಕತೆ ಇತ್ತು. ಒಟ್ಟಾರೆ, ಸ್ವತಂತ್ರ ರಾಜ್ಯವೊಂದನ್ನು ಕಟ್ಟಿ ಕೊನೆಯವರೆಗೂ ಸ್ವತಂತ್ರವಾಗಿಯೇ ಆಳಿ 1839ರಲ್ಲಿ ರಣಜಿತ್ ಸಿಂಗ್ ನಿಧನ ಹೊಂದಿದನು.

# ಇತಿಹಾಸದ ಪ್ರಮುಖ ವ್ಯಕ್ತಿಗಳು : 
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ