ಬ್ರೈಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದಿನ ಪ್ರಯುಕ್ತ ಪ್ರತಿವರ್ಷ ಜನವರಿ 4ರಂದು ವಿಶ್ವದಾದ್ಯಂತ ವಿಶ್ವ ಬ್ರೈಲ್ ಡೇ ಆಚರಿಸಲಾಗುತ್ತದೆ. ವಿಶ್ವ ಬ್ರೈಲ್ ದಿನವನ್ನು 2019ರಿಂದ ಅಧಿಕೃತವಾಗಿ ಆಚರಿಸಲಾಗುತ್ತಿದೆ. ಸಂಪರ್ಕ ವಲಯದಲ್ಲಿ ಬ್ರೈಲ್ ಲಿಪಿಯ ಮಹತ್ವ ಸಾರುವ ಉದ್ದೇಶದಿಂದ ಈ ದಿನ ಮಹತ್ವ ಪಡೆದುಕೊಂಡಿದ್ದು, ಜಗತ್ತಿನಾದ್ಯಂತ ಬ್ರೈಲ್ ದಿನವನ್ನು ಆಚರಿಸಲಾಗುತ್ತಿದೆ. ದೃಷ್ಟಿ ವಿಶೇಷಚೇತನರ ಹಕ್ಕುಗಳ ರಕ್ಷಣೆ ದೃಷ್ಟಿಯಿಂದಲೂ ಈ ದಿನ ವಿಶೇಷ ಪಡೆದಿದೆ. ಜನವರಿ 4 ಬ್ರೈಲ್ ಲಿಪಿ ಆವಿಷ್ಕಾರ ಮಾಡಿದ ಲೂಯಿಸ್ ಬ್ರೈಲ್ ಅವರ ಜನ್ಮದಿನವೂ ಆಗಿದ್ದು, ಅವರ ಹುಟ್ಟಿದ ದಿನವನ್ನು ವಿಶ್ವ ಬ್ರೈಲ್ ದಿನವಾಗಿ ಆಚರಿಸಲ್ಪಡುತ್ತಿದೆ.
ದೃಷ್ಟಿ ವಿಕಲ ಚೇತನರದಲ್ಲಿ ಬ್ರೈಲ್ ಲಿಪಿ ಹೊಸ ಆಯಾಮ ಸೃಷ್ಟಿಸಿದ್ದು, ಅವರ ಬದುಕಿಗೆ ಆಶಾಕಿರಣ ಮೂಡಿಸಿದೆ. ಈ ಸಮುದಾಯದ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲೂ ಗಮಹಾರ್ಹ ಪಾತ್ರ ನಿರ್ವಹಣೆ ಮಾಡಿದೆ. ದೃಷ್ಟಿ ವಿಕಲ ಚೇತನರು ಸ್ವಾವಲಂಬಿ ಬದುಕು ಸಾಗಿಸಲು ಬ್ರೈಲ್ ಲಿಪಿ ನಿರ್ಣಾಯಕ ಪಾತ್ರ ವಹಿಸಿದೆ.
ಯಾರು ಈ ಲೂಯಿಸ್ ಬ್ರೈಲ್..?
ಲೂಯಿಸ್ ಬ್ರೈಲ್ ಅವರು ಫ್ರಾನ್ಸ್‌ನಲ್ಲಿ ಜನವರಿ 4, 1809 ರಂದು ಜನಿಸಿದರು. 3 ನೇ ವಯಸ್ಸಿನಲ್ಲಿ ಅವರು ಆಕಸ್ಮಿಕವಾಗಿ ದೃಷ್ಟಿಕಳೆದುಕೊಂಡಿದ್ದರು. ದೃಷ್ಟಿ ಹೀನತೆ ಹೊರತಾಗಿಯೂ ಸರಿಯಾಗಿ ಓದುವುದು ಮತ್ತು ಬರೆಯಲು ಬಹಳ ಉತ್ಸಾಹ ಹೊಂದಿದ್ದರು. 15 ನೇ ವಯಸ್ಸಿನಲ್ಲಿ, ಶಾಲೆಯಲ್ಲಿ ಒಂದು ತುಂಡು ಕಾಗದದ ಮೇಲೆ ಚುಕ್ಕೆಗಳನ್ನು ಮಾಡುವ ಮೂಲಕ ಈ ಬ್ರೈಲ್ ಲಿಪಿಯನ್ನು ಅಭಿವೃದ್ಧಿಪಡಿಸಿದರು.
ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್‌ರ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಆತ ಮಾಡಿದ ಸಾಧನೆ, ಅನೇಕ ದೃಷ್ಟಿಹೀನರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ. ದೃಷ್ಟಿ ವಿಶೇಷ ಚೇತನರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.