ತಾಳಗುಂದ ಒಂದು ಚಿಕ್ಕ ಹಳ್ಳಿಯಾಗಿದ್ದು ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿದೆ. ಹಿಂದೆ ಈ ಊರನ್ನು ಸ್ಥಾನಗುಂಡೂರು ಎಂದೂ ಕರೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ತಾಳಗುಂದವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾರಣದಿಂದ ಪ್ರಖ್ಯಾತಿಯನ್ನು ಹೊಂದಿದೆ. ತಾಳಗುಂದ ಹಿಂದೆ ಒಂದು ಅಗ್ರಹಾರ ಆಗಿದ್ದುದಾಗಿ ತಿಳಿದು ಬರುತ್ತದೆ. ಅಂತಹ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಬೆಳೆಯುತ್ತಾನೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು.
ನಾಲ್ಕನೇ ಶತಮಾನದಲ್ಲಿ ಕಟ್ಟಿದ ಪ್ರಣವೇಶ್ವರ ಮಂದಿರ ಇನ್ನೂ ಇಲ್ಲಿ ಇದೆ. ತಾಳಗುಂದ ಕಂಬ ಎಂದೇ ಹೆಸರುವಾಸಿಯಾದ ಕಲ್ಲಿನ ದೊಡ್ಡ ಕಂಬವೂ ಇಲ್ಲಿದೆ. 16 ಶತಮಾನದ ಕೆಳದಿ ಚೆನ್ನಮ್ಮನ ಕಾಲದ ಶಾಸನವೂ ಇಲ್ಲಿ ಪತ್ತೆಯಾಗಿದೆ. ಇಲ್ಲಿ ದೊರೆತಿರುವ ಕಲ್ಲಿನ ಶಾಸನವನ್ನು ಕನ್ನಡದ ಮೊತ್ತಮೊದಲ ಶಾಸನವೆಂದು ಭಾರತೀಯ ಪುರಾತತ್ವ ಇಲಾಖೆಯಿಂದ ಅಧಿಕೃತವಾಗಿ ಹೇಳಲಾಗಿದೆ.
# ತಾಳಗುಂದ ಶಾಸನ :
ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.
ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ 2013-14ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ವ ಇಲಾಖೆ ಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿತು. ಇದರಂತೆ, ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಟ್ಟಿದೆ. ಈ ಶಾಸನ ರಚನೆಯಾದ ಅವಧಿ ಕ್ರಿ.ಶ. 370-450 ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ.
ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.
ಕ್ರಿ.ಶ. 345ರಲ್ಲಿ ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. 365-425ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.
# ಹಲ್ಮಿಡಿಗಿಂತಲೂ ಹಿಂದಿನ ಕನ್ನಡದ ಶಾಸನ ಪತ್ತೆ :
ಹಾಸನ ಜಿಲ್ಲೆಯ ಹಲ್ಮಿಡಿ ಶಾಸನವೇ ಇದುವರೆಗೆ ಕನ್ನಡದ ಪ್ರಾಚೀನ ಶಾಸನ ಎಂದು ಇತಿಹಾಸದಲ್ಲಿ ದಾಖಲಾಗಿತ್ತು. ಹಲವು ವರ್ಷಗಳ ಹಿಂದೆ ತಾಳಗುಂದ ದಲ್ಲೇ ಪತ್ತೆಯಾಗಿದ್ದ ಶಾಂತಿವರ್ಮನ ಕಾಲದ (ಕ್ರಿ.ಶ. 450) ಇನ್ನೊಂದು ಸ್ತಂಭ ಶಾಸನಕ್ಕಿಂತಲೂ ಈ ಶಾಸನ ಹಳೆಯದು ಎಂದು ಖಚಿತವಾಗಿದೆ.
ಪತ್ತೆಯಾದ ಶಾಸನದ ಕಾಲ ಕುರಿತು ಸಾಕಷ್ಟು ಚರ್ಚೆ ನಡೆದಿದ್ದವು. ತಾಳಗುಂದದಲ್ಲಿ ದೊರೆತ ಶಾಸನದ ಕಾಲ ಕ್ರಿ.ಶ. 370 ರಿಂದ 450ರ ಮಧ್ಯದ ಅವಧಿ ಎಂದು ಕೇಂದ್ರ ಪುರಾತತ್ವ ಇಲಾಖೆ ಇತ್ತೀಚೆಗಷ್ಟೇ ದೃಢಪಡಿಸಿದೆ. ಶಿಕಾರಿಪುರ ತಾಲ್ಲೂಕು ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ 2013–14ರಲ್ಲಿ ನಡೆಸಿದ ಉತ್ಖನನದಲ್ಲಿ ಹಲ್ಮಿಡಿಗಿಂತಲೂ ಹಿಂದಿನ ಕನ್ನಡದ ಶಾಸನ ಪತ್ತೆಯಾಗಿತ್ತು.
ಕ್ರಿ.ಶ. 345ರಲ್ಲಿ ಮಯೂರ ವರ್ಮ ಕದಂಬ ಸಾಮ್ರಾಜ್ಯ ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿ. ಮಯೂರ ವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ (365–425) ಆಳ್ವಿಕೆ ನಡೆಸಿದ್ದರು.
425–455ರವರೆಗೆ ಕಾಕುತ್ಸ ವರ್ಮ ಅಧಿಕಾರ ನಡೆಸಿದ್ದರು. 450ರಲ್ಲಿ ಹಲ್ಮಿಡಿ ಶಾಸನ ಹೊರಡಿಸಿದ್ದು ಇದೇ ಕಾಕುತ್ಸವರ್ಮ. ತಾಳಗುಂದ ಶಾಸನ ಕಾಕುತ್ಸವರ್ಮನಿಗಿಂತ ಮೊದಲೇ ಹೊರಡಿಸಲಾಗಿತ್ತು ಎಂದು ಖಚಿತವಾಗಿದೆ.
ದೇವಾಲಯದ ಉತ್ತರ ಭಾಗದಲ್ಲಿ ಪತ್ತೆಯಾಗಿದ್ದ ಈ ಶಾಸನ ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆ, ಭೂಮಿಯನ್ನು ಇನಾಮು ಆಗಿ ನೀಡಿದ ಮಾಹಿತಿ ಒಳಗೊಂಡಿದೆ. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಲಾಗಿದೆ. ಹಾಗಾಗಿ, ಶಾಸನಶಾಸ್ತ್ರದಲ್ಲಿ ಕನ್ನಡ ಶಾಸನ ಎಂದೇ ನಮೂದಿಸಲಾಗಿದೆ.