ಅವೊಗಾಡ್ರೋ ಸಂಖ್ಯೆ ಮತ್ತು ಅವೊಗಾಡ್ರೋ ನಿಯಮ

ಅವೊಗಾಡ್ರೋ ಸಂಖ್ಯೆ ಮತ್ತು ಅವೊಗಾಡ್ರೋ ನಿಯಮ

ಅವೊಗಾಡ್ರೋ ಸಂಖ್ಯೆ ಯಾವುದೇ ಪದಾರ್ಥದ ಒಂದು ಮೋಲ್‌ನಲ್ಲಿರುವ ಕಣಗಳ (ಅಣು, ಪರಮಾಣು ಮುಂತಾದ) ಸಂಖ್ಯೆ. ಅವೊಗಾಡ್ರೋ ಸಂಖ್ಯೆಗೆ ಅಳತೆ ಇಲ್ಲ, ಅದೊಂದು ಸಂಖ್ಯೆ ಮಾತ್ರ. ಇದರ ಮಹತ್ವ ಐತಿಹಾಸಿಕ. ಅವೊಗಾಡ್ರೋ ನಿಯಂತಾಕ 1971ರಿಂದ ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯ ಭಾಗವಾಗಿದೆ.

ಇದು mol-1 (ಪರ್ ಮೋಲ್)ನಲ್ಲಿ ಹೇಳಲ್ಪಡುತ್ತದೆ ಮತ್ತು ಇದರ ಚಿಹ್ನೆ NA ಅಥವಾ L. ಇಂದಿನ ಇದರ ಬೆಲೆ 6.022 140 857(74)್ಠ1023 mol−1. ಅವೊಗಾಡ್ರೋ ಸಂಖ್ಯೆಯು ಮ್ಯಾಕ್ರೋ ಗಾತ್ರ ಮತ್ತು ಮೈಕ್ರೊ ಗಾತ್ರ (ಅಣು, ಪರಮಾಣು ಹಂತದ) ಗಳ ನಡುವೆ ಸಂಬಂಧದ ಕೊಂಡಿ ಬೆಸೆಯುತ್ತದೆ.

ಅವೊಗಾಡ್ರೋ ಸಂಖ್ಯೆಯ ಇತಿಹಾಸ ಅವೊಗಾಡ್ರೋ ನಿಯಮದ ಇತಿಹಾಸದೊಂದಿಗೆ ಬೆಸೆದು ಕೊಂಡಿದೆ. ಅಮೆಡಿಯೋ ಅವೊಗಾಡ್ರೋ ಒಂದೇ ತಾಪಮಾನ ಮತ್ತು ಒತ್ತಡದಲ್ಲಿ ಅನಿಲದ ಘನಗಾತ್ರದಲ್ಲಿನ (ವಾಲ್ಯೂಮ್) ಕಣಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳಿದ. ಇದು ಅವೊಗಾಡ್ರೋ ನಿಯಮ ಎಂದು ಪ್ರಸಿದ್ಧಿ ಪಡಿದಿದೆ. ಮುಂದೆ 1909ರಲ್ಲಿ ಜೀನ್ ಪೆರ್ರಿನ್ ಈ ಸಂಖ್ಯೆಯನ್ನು ಅವೊಗಾಡ್ರೋ ನೆನಪಿನಲ್ಲಿ ಅವೊಗಾಡ್ರೋ ಸಂಖ್ಯೆ ಎಂದು ಕರೆಯಲು ಸೂಚಿಸಿದ.

ಜೀನ್ ಪೆರ್ರಿನ್ ತನ್ನ ಪ್ರಯೋಗದಲ್ಲಿ ಕಂಭೋಜ ಮರದ ಅಂಟುರಾಳಗಳಿಂದ ಪಡೆದ ಬ್ರೌನಿಯನ್ ಚಲನೆಯನ್ನು ಅಳೆದ. ಈ ಮೂಲಕ ಅವನು ಐನ್‌ಸ್ಟೀನ್ ಸಿದ್ಧಾಂತಕ್ಕೆ ಪ್ರಾಯೋಗಿಕ ಪುರಾವೆ ಒದಗಿಸಿದ.ಅಲ್ಲದೆ ಅವೊಗಾಡ್ರೋ ಸಂಖ್ಯೆಯನ್ನು ಪಡೆದ ಮತ್ತು ಅಣುಗಳ ಇರುವಿಕೆಗೆ ಸಾಕ್ಷಿ ಒದಗಿಸಿದ. ಈ ಪ್ರಯೋಗಕ್ಕೆ 1926ರಲ್ಲಿ ಅವನಿಗೆ ನೋಬೆಲ್ ಪ್ರಶಸ್ತಿ ಲಭಿಸಿತು.

ಹೆಚ್ಚು ಖಚಿತವಾದ ಅವೊಗಾಡ್ರೋ ಸಂಖ್ಯೆಯನ್ನು ಮಿಲ್ಲಿಕಾನ್‌ನ ಪ್ರಯೋಗದ ನಂತರ ಪಡೆಯಲಾಯಿತು. ರಾಬರ್ಟ್ ಎ. ಮಿಲ್ಲಿಕಾನ್ ಎಲೆಕ್ಟ್ರಾನ್ ಆವೇಶ (ಚಾರ್ಜ್)ವನ್ನು ನೇರವಾಗಿ ಅಳೆಯುವ ಎಣ್ಣೆಯ ಹನಿ ಪ್ರಯೋಗವನ್ನು 1909ರಲ್ಲಿ ರೂಪಿಸಿದ. ಈ ಪ್ರಯೋಗದಲ್ಲಿ ಎಣ್ಣೆಯ ಸಣ್ಣ ಹನಿಗಳನ್ನು ವಿಕಿರಣಗಳ ಮೂಲಕ (ಉದಾಹರಣೆಗೆ ಎಕ್ಸ್-ರೇ) ಅಯಾನೀಕರಿಸಿದ ಮತ್ತು ಒಂದು ಹನಿ ಎಷ್ಟು ವೇಗವಾಗಿ ಕೆಳಬೀಳುತ್ತದೆ ಎಂಬುದನ್ನು ಗುರುತಿಸುವ ಮೂಲಕ ಅದರ ದ್ರವ್ಯರಾಶಿಯನ್ನು ಪಡೆಯಬಹುದು.

ಹಲವು ಸಲ ಈ ಪ್ರಯೋಗವನ್ನು ಮರುಕಳಿಸಿ ಎಣ್ಣೆಯ ಸಣ್ಣಹನಿಗಳ ಆವೇಶವು ಕನಿಷ್ಠ ಆವೇಶದ ಪೂರ್ಣಾಂಕಗಳಲ್ಲಿ ಇರುತ್ತದೆ ಎಂದು ಗುರುತಿಸಿದ. ಹೀಗೆ ಎಲೆಕ್ಟ್ರಾನ್‌ನ ಕನಿಷ್ಠ ಆವೇಶವನ್ನು ಪತ್ತೆಹಚ್ಚಲಾಯಿತು. ಇದಕ್ಕೆ ಅವನಿಗೆ 1922ರಲ್ಲಿ ನೋಬೆಲ್ ಬಹುಮಾನ ಲಭ್ಯವಾಯಿತು.

ಈ ಪ್ರಯೋಗಕ್ಕೂ ಬಹುಮುಂಚೆಯೇ 1833ರಲ್ಲಿ ಫ್ಯಾರಡೆ ತಾಮ್ರ ಸಲ್ಪೇಟ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ ಕ್ಯಾಥೋಡ್ ಅಥವಾ ರುಣದ್ವಾರದಲ್ಲಿ ಶೇಕರವಾದ ತಾಮ್ರವು ಹರಿಸಿದ ವಿದ್ಯುತ್‌ನ ಬಲ ಮತ್ತು ಅದು ಹರಿಸಿದ ಸಮಯದ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟಿದ್ದ. ಹೀಗಾಗಿ ಫ್ಯಾರಡೆ ನಿಯತಾಂಕವೆಂದರೆ ಒಂದು ಮೋಲ್ ಎಲೆಕ್ಟ್ರಾನಿನಲ್ಲಿರುವ ಅಥವಾ ಒಂದು ಮೋಲ್‌ ವೇಲನ್ಸಿಯ ಅಯಾನಿನಲ್ಲಿರುವ ವಿದ್ಯುತ್ ಆವೇಶ (ಚಾರ್ಜ್) ಮತ್ತು ಇದನ್ನು ಎಲೆಕ್ಟ್ರಾನ್‌ ಚಾರ್ಜ್ ಮತ್ತು ಅವೊಗಾಡ್ರೋ ಸಂಖ್ಯೆಯ ಗುಣಲಬ್ಧವಾಗಿಯೂ ತೋರಿಸ ಬಹುದು. ಹೀಗಾಗಿ ಫ್ಯಾರಡೆ ನಿಯತಾಂಕ ಮತ್ತು ಎಲೆಕ್ಟ್ರಾನ್ ಒಂದರ ಆವೇಶ ತಿಳಿದಿದ್ದಲ್ಲಿ ಅವೊಗಾಡ್ರೋ ಸಂಖ್ಯೆಯನ್ನು ಪಡೆಯಬಹುದು. ಗಣಿತೀಯವಾಗಿ ಇದನ್ನು ಹೀಗೆ ತೋರಿಸಬಹುದು:

ಇಲ್ಲಿ ‌NA ‌ಅವೊಗಾಡ್ರೋ ಸಂಖ್ಯೆಯನ್ನೂ; F ಫ್ಯಾರಡೆ ನಿಯತಾಂಕವನ್ನೂ ಮತ್ತು e ಎಲೆಕ್ಟ್ರಾನಿನ ಆವೇಶ (ಚಾರ್ಜ್) ತೋರುತ್ತವೆ.

# ಅವೊಗಾಡ್ರೋ ನಿಯಮ : 
ಅವೊಗಾಡ್ರೋ ನಿಯಮವನ್ನು (ಕೆಲವೊಮ್ಮೆ ಅವೊಗಾಡ್ರೋ ಊಹನ ಎಂದು ಸಹ ಕರೆಯಲಾಗುತ್ತದೆ) 1811ರಲ್ಲಿ ಅಮೆಡಿಯೋ ಅವೊಗಾಡ್ರೋ ಮಂಡಿಸಿದ. ಇದರ ಪ್ರಕಾರ ತಾಪಮಾನ ಮತ್ತು ಒತ್ತಡಗಳು ಒಂದೇ ಆಗಿದ್ದಲ್ಲಿ ಅನಿಲದ ಘನಗಾತ್ರ (ವಾಲ್ಯೂಮ್) ಹೆಚ್ಚಾದಂತೆ ಅದರಲ್ಲಿನ ಕಣಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಮತ್ತು ಅನಿಲದ ಘನಗಾತ್ರ ಕುಗ್ಗಿದಂತೆ ಅದರಲ್ಲಿನ ಕಣಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.

# ಇತಿಹಾಸ :
1811ರಲ್ಲಿ ಅಮೆಡಿಯೋ ಅವೊಗಾಡ್ರೋ ಅನಿಲದ ಘನಗಾತ್ರ (ವಾಲ್ಯೂಮ್) ಮತ್ತು ಅದರಲ್ಲಿನ ಅಣುಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತವೆ ಎಂದು ಊಹನ (ಹೈಪೊಥೀಸಿಸ್) ಮಂಡಿಸಿದ. ಗೇ-ಲೂಸ್ಯಾಕ್ ಮತ್ತು ಇತರರು ಇಂತಹದೇ ಚಿಂತನೆ ಹೊಂದಿದ್ದರು. ಆದರೆ ಅವೊಗಾಡ್ರೋ ಚಿಂತನೆಯು ಸರಿಯಾದ ಅಣು ಪರಿಕಲ್ಪನೆಯನ್ನು ಸಹ ಹೊಂದಿತ್ತು.

ಅವನು ಸರಿಯಾಗಿಯೇ ಜಲಜನಕ ಮತ್ತು ಆಮ್ಲಜನಕದಂತಹ ಅಣುಗಳಲ್ಲಿ ಎರಡು ಪರಮಾಣುಗಳು ಇರುತ್ತವೆಂತಲೂ ಮತ್ತು ನೀರಿನಲ್ಲಿ ಮೂರು ಪರಮಾಣುಗಳು ಇರುತ್ತವೆ ಎಂದು ಸರಿಯಾಗಿಯೇ ಸೂಚಿಸಿದ್ದ. ಅವನ ಚಿಂತನೆಯು ಡಾಲ್ಟನ್‌ನ ಪರಮಾಣು ಊಹನ ಮತ್ತು ಗೇ-ಲುಸ್ಯಾಕ್‌ನ ಘನಗಾತ್ರಗಳು ಒಟ್ಟಾಗುವ ನಿಯಮ (ಲಾ ಆಫ್ ಕಂಬೈನಿಂಗ್ ವಾಲ್ಯೂಮ್‌)ಗಳ ನಡುವೆ ಸಂಬಂಧ ಬೆಸೆಯುತ್ತಿತ್ತು.

ಆದರೆ, ಆ ಸಮಯಕ್ಕೆ ಇನ್ನೂ ಎರಡು ಅಥವಾ ಹೆಚ್ಚಿನ ಪರಮಾಣುಗಳು ಸೇರಿ ಅಣುವಾಗಿ ಬಂಧಿತವಾಗುವುದರ ಬಗೆಗೆ ಇನ್ನೂ ಸರಿಯಾಗಿ ತಿಳಿದಿರಲಿಲ್ಲ. ಸ್ಟಾನಿಸ್ಲಾವೊ ಕ್ಯಾನಿಜರೊ ಅಣು ಮತ್ತು ಪರಮಾಣುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ.ಕ್ಯಾನಿಜರೊ ಅವೊಗಾಡ್ರೊ ನಿಯಮಕ್ಕೆ ಮರುಜೀವ ಕೊಟ್ಟನಷ್ಟೇ ಅಲ್ಲ ಕಾರ್ಬನಿಕ ರಸಾಯನಿಕಶಾಸ್ತ್ರಜ್ಞನಾಗಿ ಅದನ್ನು ತನ್ನ ಶಾಖೆಯಲ್ಲಿ ಹೇಗೆ ಬಳಸಬಹುದು ಎಂದು ತೋರಿಸಿಕೊಟ್ಟ.

1860ರಲ್ಲಿ ರಸಾಯನಶಾಸ್ತ್ರಜ್ಞರ ಮೊದಲನೆಯ ಅಂತರರಾಷ್ಟ್ರೀಯ ಕಾಂಗ್ರೆಸ್‌ನ್ನು ಅಣು, ಪರಮಾಣು ವ್ಯಾಖ್ಯಾನಿಸಲು ಮತ್ತು ರಾಸಾಯನಕ ಹೆಸರುಗಳ ಬಳಕೆಯ ಬಗೆಗೆ ಕರೆಯಲಾಗಿತ್ತು. ಅಲ್ಲಿ ಕ್ಯಾನಿಜರೊ ಚಿಂತನೆ ಪ್ರಭಾವ ಬೀರಿತು.

Comments

No comments yet. Why don’t you start the discussion?

Leave a Reply

Your email address will not be published. Required fields are marked *